ಮಕ್ಕಳ ಪ್ರತಿಭೆ ಗುರುತಿಸಲು ಚಿಗುರು ಕಾರ್ಯಕ್ರಮ

bhr chiguru
ಬಾಳೆಹೊನ್ನೂರಿನಲ್ಲಿ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ಉದ್ಘಾಟಿಸಿದರು. ಬಿ.ಸಿ.ಗೀತಾ, ರವಿಚಂದ್ರ, ರಮೇಶ, ತಿಮ್ಮಯ್ಯಗೌಡ ಇತರರಿದ್ದರು.
Published on

ಬಾಳೆಹೊನ್ನೂರು: ಚಿಗುರು ಕಾರ್ಯಕ್ರಮ ಮಕ್ಕಳ ಪ್ರತಿಭೆ ಗುರುತಿಸಿ ಹೊರತರಲು ಉತ್ತಮ ವೇದಿಕೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯಾದ್ಯಂತ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಇಲಾಖೆಯ ಕಾರ್ಯಕ್ರಮಗಳು ನಡೆಯುವುದು ವಿರಳ. ಈ ಬಾರಿ ಮಲೆನಾಡು ಭಾಗವನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ಮಾಡಿರುವುದು, ಮಕ್ಕಳಿಗೆ ಉತ್ತೇಜನ ನೀಡಿರುವುದು ಶ್ಲಾಘನೀಯ ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಮೊಬೈಲ್, ಕಂಪ್ಯೂಟರ್ ಯುಗದಲ್ಲಿ ಮಕ್ಕಳಿಗಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿರುವುದು ಸಂತಸ ತಂದಿದೆ. ಕಲೆಯನ್ನು ಗುರುತಿಸಿದರೆ ಮಾತ್ರ ಕಲೆಗಾರರು ಬೆಳೆಯಲು ಸಾಧ್ಯ. ಮಕ್ಕಳು ಕಂಪ್ಯೂಟರ್, ಮೊಬೈಲ್ ಬಿಟ್ಟು ಕಲೆ, ಸಂಸ್ಕೃತಿ ಉಳಿಸುವತ್ತ ಗಮನಹರಿಸಬೇಕು ಎಂದರು.

ಚಿಕ್ಕಮಗಳೂರಿನ ಸಿ.ಎನ್.ವೈಷ್ಣವಿ ತಂಡದಿಂದ ಕರ್ನಾಟಕ ಶಾಸೀಯ ಸಂಗೀತ, ಚಿಕ್ಕಮಗಳೂರು ಹಂಸಿನಿ ತಂಡದಿಂದ ಸುಗಮ ಸಂಗೀತ, ಕಳಸದ ಸುಖಿ ತಂಡದಿಂದ ಜಾನಪದ ಗೀತೆ, ಎಸ್.ಪೇಟೆಯ ಕೃಪಾ ತಂಡದಿಂದ ಸಮೂಹ ನೃತ್ಯ, ಬಾಳೆಹೊನ್ನೂರು ಶ್ರೀಕೃತಿ ತಂಡದಿಂದ ನಾಟಕ, ಕಡೂರು ಸಾನ್ವಿಕಾ ಏಕಪಾತ್ರಾಭಿನಯ, ಎಸ್.ಪೇಟೆ ದೇವನಿ ಪೃಥ್ವಿರಾಜ್ ಪುರ ತಂಡದಿಂದ ಭರತನಾಟ್ಯ ನಡೆಯಿತು.

ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ, ರೋಟರಿ ನಿಯೋಜಿತ ಅಧ್ಯಕ್ಷ ಎಂ.ವಿ.ತಿಮ್ಮಯ್ಯ ಗೌಡ, ಕಾರ್ಯಕ್ರಮ ಸಂಘಟಕಿ ನಯನಾ ಪ್ರಸಾದ್, ಶಿಕ್ಷಕರಾದ ಕೆ.ಎಂ.ರಾಘವೇಂದ್ರ, ಸುರೇಂದ್ರ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net