

ಪಾಂಡವಪುರ: ಮನೆ ಮುಂದಿನ ಪೆಟ್ಟಿ ಅಂಗಡಿಯಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಚಿಕ್ಕಾಡೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಗ್ರಾಮದ ನಿವಾಸಿ ಧರ್ಮರಾಜು ಶನಿವಾರ ಧರಣಿ ನಡೆಸಿದರು.
ಚಿಕ್ಕಾಡೆ ಗ್ರಾಮ ಪಂಚಾಯಿತಿ ಮುಂದೆ ಧರಣಿ ಕುಳಿತ ಧರ್ಮರಾಜು ಮಾತನಾಡಿ, ಪೆಟ್ಟಿ ಅಂಗಡಿಯಲ್ಲಿ ಮದ್ಯ ಅಕ್ರಮ ಮಾರಾಟ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಸಹಕಾರ ನೀಡುತ್ತಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ನಾವು ಮನೆಯಲ್ಲಿ ವಾಸಿಸುವುದೇ ಕಷ್ಟವಾಗಿದೆ. ಕುಡಿದ ಅಮಲಿನಲ್ಲಿ ತುಂಬಾ ಗಲಾಟೆ ಮಾಡುತ್ತಾರೆ. ಇದರಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳು ಹೊರಗೆ ಬರಲು ಆಗುತ್ತಿಲ್ಲ. ಅಬಕಾರಿ ಇಲಾಖೆಗೆ ದೂರು ನೀಡಿದರು ಏನೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಅಬಕಾರಿ ಇಲಾಖೆಗೆ ದೂರು ಕೊಟ್ಟಿದ್ದಕ್ಕೆ ಅಂಗಡಿ ಮಾಲೀಕ ಕೊಲೆ ಬೆದರಿಕೆ ಹಾಕಿದ್ದಾನೆ. ಗ್ರಾಪಂ ಅಧಿಕಾರಿಗಳು ಪೆಟ್ಟಿ ಅಂಗಡಿಗೆ ವಿದ್ಯುತ್ ಸರಬರಾಜು ನೀಡಿದ್ದಾರೆ. ಎಲ್ಲರ ಸಹಕಾರದಿಂದ ಮದ್ಯ ಅಕ್ರಮ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮತ್ತೆ ಧರಣಿ ಕೂರುತ್ತೇನೆ ಎಂದು ಹೇಳಿದರು.