ರುದ್ರಭೂಮಿಯಲ್ಲಿ ಸಾರ್ವಜನಿಕರ ಪ್ರತಿಭಟನೆ

25 AKR 01A.
Published on

ಅಕ್ಕಿಆಲೂರ: ಪಟ್ಟಣದ ಹಿಂದು ಧರ್ಮದ 35 ಸಮಾಜದವರು ಶತಮಾನಗಳಿಂದ ಅಂತ್ಯ ಸಂಸ್ಕಾರ ಮಾಡಿಕೊಂಡು ಬಂದ ರುದ್ರಭೂಮಿಯಲ್ಲಿ ಕೆಲವರು ವ್ಯವಸಾಯ ಆರಂಭಿಸಿದ್ದಾರೆ. ಇದರಿಂದ ಅಂತ್ಯಸಂಸ್ಕಾರ ನಡೆಸಲು ತೊಂದರೆಯಾಗಿದೆ ಎಂದು ಆರೋಪಿಸಿ ಸಮಾಜದ ಮುಖಂಡರು ಗುರುವಾರ ರುದ್ರಭೂಮಿಯಲ್ಲಿ ಪ್ರತಿಭಟನೆ ನಡೆಸಿದರು.

ಅಕ್ಕಿಆಲೂರಿನ ಗಂಗಾಮತ, ಬ್ರಾಹ್ಮಣ, ಹಿಂದುಳಿದ, ದಲಿತ, ವಿಶ್ವಕರ್ಮ, ಕಮಾಟಿ ಸೇರಿ ಹಿಂದು ಧರ್ಮದ 35 ಸಮಾಜದವರು ನೂರಾರು ವರ್ಷಗಳಿಂದ ಪಟ್ಟಣದ ನರಸಿಂಗ್ ರಾವ್ ದೇಸಾಯಿ ಕಾಲೇಜ್ ಹಿಂಭಾಗದ ಸುಮಾರು 4 ಎಕರೆ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸುತ್ತ ಬಂದಿದ್ದಾರೆ. ಆದರೆ, ಕಳೆದ ಐದು ದಿನಗಳದ ಹಿಂದೆ ಪಟ್ಟಣದ ಮರತಿಮಣ್ಣನವರ ಕುಟುಂಬವೊಂದು ತಮಗೆ ಸೇರಿದ ಆಸ್ತಿ ಎಂದು ವ್ಯವಸಾಯ ಮಾಡಿ ಗೋವಿನಜೋಳ ಬೆಳೆಯುತ್ತಿದ್ದಾರೆ. ಅಕ್ಕಿಆಲೂರಿನ 35 ಸಮಾಜದಲ್ಲಿ ಯಾರಾದರೂ ನಿಧನರಾದರೆ ಅವರ ಅಂತ್ಯ ಸಂಸ್ಕಾರಕ್ಕೆ ಇರುವ ಏಕೈಕ ಜಾಗದಲ್ಲಿ ಇದ್ದಕ್ಕಿದ್ದಂತೆ ಕೃಷಿ ಚಟುವಟಿಕೆ ನಡೆಸಿದರೆ ನಾವು ಸಂಸ್ಕಾರ ಎಲ್ಲಿ ಮಾಡಬೇಕು ಎಂದು ನೂರಾರು ಜನರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸಿಪಿಐ ಶಿವಶಂಕರ ಗಣಾಚಾರ್ಯ, ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ, ಸದ್ಯ ಕರೊನಾ ತಾಂಡವವಾಡುತ್ತಿದೆ. ಜನತೆ ಗುಂಪು ಗೂಡುವುದು ಕಾನೂನಿನ ಪ್ರಕಾರ ಅಪರಾಧ. ಹಿರಿಯ ಅಧಿಕಾರಿಗಳ ಜತೆ ಪಟ್ಟಣದ ಎಲ್ಲ ಸಮಾಜದ ಮುಖಂಡರು ಸಭೆ ನಡೆಸಿ, ನಿರ್ಧಾರ ಕೈಗೊಳ್ಳೋಣ ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಗ್ರಾಪಂ ಅಧ್ಯಕ್ಷ ಪ್ರದೀಪ ಶೇಷಗಿರಿ, ಅಶೋಕ ಸಣ್ಣವೀರಪ್ಪನವರ, ಕೃಷ್ಣ ಈಳಿಗೇರ, ತಿಪ್ಪಣ್ಣ ಸವಣೂರ, ಲಕ್ಷ್ಮಣ ಶೇಷಗಿರಿ, ಐ. ವಾಯ್. ಮಾಳೋದೆ, ಎಂ. ವ್ಹಿ. ತಟ್ಟಿ, ಮಂಜು ಮ್ಯಾದರ, ಪರಶುರಾಮ ಕೊರಚರ, ರವಿ ಕಲಾಲ, ವೆಂಕಟೇಶ ಬೋಂಗಾಳೆ, ಶಿವಣ್ಣ ದೇಸಾಯಿ, ಪರಶುರಾಮ ಮ್ಯಾದರ, ಲಕ್ಷ್ಮಣ ಹೊನ್ನಣ್ಣನವರ, ಚಂದ್ರು ಜಾಗಾಪುರ, ಕೃಷ್ಣಾ ಅರ್ಕಾಸಾಲಿ, ಮೋನೇಶ ಬಡಿಗೇರ, ಮಹದೇವಪ್ಪ ಹಂಜಗಿ ಉಪಸ್ಥಿತರಿದ್ದರು.

ಸಭೆ ಇಂದು: ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ನೇತೃತ್ವದಲ್ಲಿ ಜೂ. 26ರಂದು ಹಾನಗಲ್ಲ ತಹಸೀಲ್ದಾರ್ ಕಚೇರಿಯಲ್ಲಿ ರುದ್ರಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಕಿಆಲೂರಿನ ಎಲ್ಲ ಸಮಾಜದ ಮುಖಂಡರು ಮತ್ತು ಹೊಲದ ಮಾಲೀಕರ ನಡುವೆ ಸಭೆ ಏರ್ಪಡಿಸಲಾಗಿದೆ ಎಂದು ಸಿಪಿಐ ಶಿವಶಂಕರ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net