ಕಾಶ್ಮೀರದ ಪಹಲ್ಗಾಮ್ ಘಟನೆ ಖಂಡಿಸಿ ಪ್ರತಿಭಟನೆ

1001277277
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದುಗಳ ಮಾರಣಹೋಮ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೊಳೆನರಸೀಪುರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Published on

ಹೊಳೆನರಸೀಪುರ: ಕಾಶ್ಮೀರದ ಪಹಲ್ಗಾಮ್ ಮತ್ತು ಪಶ್ಚಿಮ ಬಂಗಾಳದಲ್ಲಿ ಪಾಕಿಸ್ತಾನದ ಕುಮ್ಮಕ್ಕಿನಿಂದ ಹಿಂದುಗಳ ಮೇಲೆ ನಡೆಯುತ್ತಿರುವ ಭಯೋತ್ಪಾದನಾ ಹತ್ಯಾಕಾಂಡದ ವಿರುದ್ಧ ಹಿಂದುಗಳು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಹಿಂದು ಹಿತರಕ್ಷಣಾ ಸಮಿತಿಯ ಮುಖಂಡ ಹೊ.ಸು.ರಮೇಶ್ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಹಿಂದು ಹಿತರಕ್ಷಣಾ ಸಮಿತಿ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕಾಶ್ಮೀರದಲ್ಲಿ ಅಮಾಯಕ ಹಿಂದು ಪ್ರವಾಸಿಗರ ಹತ್ಯೆಯನ್ನು ವಿರೋಧಿಸಿ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂದುಗಳ ಮಾರಣ ಹೋಮವನ್ನು ಖಂಡಿಸಿ ಕರೆ ನೀಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಭಾರತದ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದು ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು, ಧರ್ಮ, ಜಾತಿ ಯಾವುದೆಂದು ಕೇಳಿ ಹತ್ಯೆ ಮಾಡಿದ ಉಗ್ರವಾದಿಗಳ ಭಯೋತ್ಪಾದನಾ ಕೃತ್ಯ ಖಂಡನೀಯ. ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ನೆಲೆಸಿ ನಾಗರಿಕ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಅಲ್ಲಿ ಶಾಂತಿ ನೆಲೆಸಿ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದು ಅಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಸರಿಯಾಗುತ್ತಿರುವುದನ್ನು ಸಹಿಸದ ಪಾಕಿಸ್ತಾನವು ಭಯೋತ್ಪಾದನೆ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಖಂಡನೀಯ. ಭಾರತದ ಹಿಂದು ಮತ್ತು ಮುಸ್ಲಿಂ ಸಮುದಾಯದವರು ಇಂತಹ ಸಂದರ್ಭಗಳಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿ ನಮ್ಮ ಸೈನಿಕರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವ ಅವಶ್ಯಕತೆ ಇದೆ ಎಂದರು.

ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಅಮೂಲಾಗ್ರವಾಗಿ ಬೇರು ಸಮೇತ ನಿರ್ಮೂಲನೆ ಮಾಡಲು ನಾವೆಲ್ಲರೂ ಸೈನಿಕರ ಜತೆಯಲ್ಲಿ ಮತ್ತು ಕೇಂದ್ರ ಸರ್ಕಾರದ ಜತೆ ಕೈ ಜೋಡಿಸಬೇಕು. ಹಿಂದುಗಳು ಒಗ್ಗಟ್ಟಾಗದಿದ್ದರೆ ಭಯೋತ್ಪಾದನಾ ಕೃತ್ಯಗಳು ಎಲ್ಲಿ ಬೇಕಾದರೂ ನಡೆಯುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಬೆಳಗ್ಗೆ 10.30ಕ್ಕೆ ಚೆನ್ನಾಂಬಿಕ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪೇಟೆ ಮುಖ್ಯರಸ್ತೆಯಲ್ಲಿ ಸಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಸಮಾವೇಶಗೊಂಡಿತು. ಕೆಲ ನಿಮಿಷಗಳವರೆಗೆ ಮಾನವ ಸರಪಳಿ ನಿರ್ಮಿಸಿ ನಂತರ ಉಗ್ರವಾದಿಗಳ ಪ್ರತಿಕೃತಿಯನ್ನು ದಹಿಸಿ ಘೋಷಣೆಗಳನ್ನು ಕೂಗಿ ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net