ಶ್ರೀಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣ, ದೆಹಲಿಯಲ್ಲಿ ಪ್ರತಿಭಟನೆ: ಗುಹಾ ಎಚ್ಚರಿಕೆ

guru raghavendra co op bank
Published on

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನ ಕೋಟ್ಯಂತರ ರೂಪಾಯಿ ಹಗರಣ ಬೆಳಕಿಗೆ ಬಂದು ಎರಡುವರೆ ವರ್ಷ ಆಯ್ತು. ಈ ಹಗರಣದ ಬಗ್ಗೆ ಸರ್ಕಾರ ಇನ್ನೂ ವಂಚನೆಗೊಳಾಗದ ಠೇವಣಿದಾರರು ಮತ್ತು ಷೇರುದಾರರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ತೆಗೆದುಕೊಂಡಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಿಲ್ಲ. ಹೀಗಾಗಿ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮುಂದಿನ ಸಂಸತ್ ಅಧಿವೇಶನದ ವೇಳೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾಪೋಷಕ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ತಿಳಿಸಿದ್ದಾರೆ.

ಬೆಂಗಳೂರಿನ ಬಸವನಗುಡಿಯ ಅಭಿನವ ವಿದ್ಯಾವಿಹಾರ ಸಭಾಂಗಣದಲ್ಲಿ ಮುಂದಿನ ಹೋರಾಟದ ಬಗ್ಗೆ ಇಂದು ಚಿಂತನ-ಮಂಥನ ಸಭೆ ನಡೆಯಿತು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು, ವಂಚನೆಗೊಳಗಾದ ನೂರಾರು ಮಂದಿ ಈ ಚಿಂತನ-ಮಂಥನ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದರು.

ವಂಚನೆಗೊಳಾಗದ ಎಲ್ಲಾ ಸಹಕಾರ ಸೌಹಾರ್ದ ಬ್ಯಾಂಕ್‌ಗಳ ಮಹಾ ಒಕ್ಕೂಟವನ್ನು ರಚಿಸಲು ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ವಂಚನೆಗೆ ಒಳಾಗದವರಿಗೆ ಪರಿಹಾರವನ್ನು ನೀಡಬೇಕು ಎಂದು ಮುಂಬರುವ ಅಧಿವೇಶನದ ವೇಳೆ ದೆಹಲಿಯಲ್ಲಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಅಂದಹಾಗೆ ಈ ಬ್ಯಾಂಕ್‌ಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಮೇಲೆ ಏನೂ ಕ್ರಮ ತೆಗೆದುಕೊಂಡಿಲ್ಲ. ವಂಚನೆ ಮಾಡಿದವರೆಲ್ಲ ಐಷಾರಾಮಿ ಕಾರಲ್ಲಿ ಓಡಾಡುತ್ತಿದ್ದಾರೆ. ವಂಚನೆಗೊಳಾಗದವರ ಬದುಕು ಬೀದಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತಂತೆ ರಾಜ್ಯದ ಎಲ್ಲಾ ಸಂಸದರ ಜೊತೆಗೂ ಮಾತುಕತೆ ನಡೆಸುತ್ತೇವೆ. ಅವರನ್ನು ಜೊತೆಗೆ ಸೇರಿಸಿಕೊಂಡು ನೊಂದವರಿಗೆ ಪರಿಹಾರ ಸಿಗುವಂತೆ ಕೇಳಿಕೊಳ್ಳುತ್ತೇವೆ. ಒಂದು ವೇಳೆ ನಮಗೆ ಸೂಕ್ತ ಪರಿಹಾರ ಸಿಗಲಿಲ್ಲ ಎಂದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಡಾ.ಶಂಕರ್ ಗುಹಾ ಎಚ್ಚರಿಕೆ ನೀಡಿದರು.

ಇನ್ನು ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಮತ್ತು ಸಂಸದ ತೇಜಸ್ವಿಸೂರ್ಯ ಅವರ ಮೃದು ಧೋರಣೆಯ ಬಗ್ಗೆಯೂ ಶಂಕರ್ ಗುಹಾ ಅವರು ಕಿಡಿ ಕಾರಿದರು. ಈ ಹಗರಣದಲ್ಲಿ ಸ್ಥಳೀಯ ಶಾಸಕರು ಮತ್ತು ಸಂಸದರು ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವ ಅನುಮಾನ ಕೂಡ ಮೂಡುತ್ತಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ನೀವೇ, ಆದರೂ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಬಾರಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇನೆ. ಎರಡು ವರ್ಷದ ಹಿಂದೆ ನಾನು ಈ ಬಗ್ಗೆ ಪ್ರಶ್ನಿಸಿದ್ದೆ. ಆ ಸಮಯದಲ್ಲಿ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

ಮುಂಬರುವ ಮುಂಗಾರು ಅಧಿವೇಶನದಲ್ಲಿ ಏನು ಕೇಳಬೇಕು, ಹಣ ಹಿಂಪಡೆಯಬೇಕಾದ ದಾರಿಗಳೇನು ಎನ್ನುವುದರ ಬಗ್ಗೆ ನಿಮ್ಮ ಅಮೂಲ್ಯ ಸಲಹೆಗಳನ್ನು ನಾನು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಜಿ.ಸಿ. ಚಂದ್ರ ಶೇಖರ್ ಭರವಸೆ ನೀಡಿದರು.

ಇಲ್ಲಿ ಯಾವುದೇ ರಾಜಕೀಯವಾಗಲಿ ಸ್ವಪ್ರತಿಷ್ಠೆಯಾಗಲಿ ಬೇಕಾಗಿಲ್ಲ. ಯಾವುದೇ ರೀತಿಯ ಕ್ರೆಡಿಟ್ ಕೂಡ ನನಗೆ ಬೇಕಾಗಿಲ್ಲ. ವಂಚನೆಗೆ ಒಳಾಗದವರಿಗೆ ಹಣ ಕೊಡಿಸುವ ವಿಚಾರದಲ್ಲಿ ಪಕ್ಷಭೇದ ಮರೆತು ಎಲ್ಲರೂ ಹೋರಾಡಬೇಕಿದೆ. ಈ ವಿಚಾರದಲ್ಲಿ ರಾಜಕೀಯ ತಂದರೆ ಹಣ ಕೊಡಿಸುವ ವಿಚಾರ ಹಿಂದಕ್ಕೆ ಬೀಳಲಿದೆ. ಮುಳ್ಳಿನ ಮೇಲೆ ಬಟ್ಟೆ ಬಿದ್ದಿದೆ, ಅದನ್ನು ಹರಿಯದಂತೆ ಎತ್ತಿಕೊಳ್ಳುವ ಜಾಣ್ಮೆ ಪ್ರದರ್ಶಿಸಬೇಕಿದೆ ಎಂದರು.

ಈ ಚಿಂತನ-ಮಂಥನ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿವೃತ್ತ ನಿವೃತ್ತ ಒಂಬುಡ್ಸ್‌ಮನ್ ಪಳನಿಸ್ವಾಮಿ ಉಪಸ್ಥಿತರಿದ್ದರು. ಶ್ರೀ ಗುರು ರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್, ಶ್ರೀ ಗುರು ಸಾರ್ವಭೌಮ ಸೌಹಾರ್ದ ಸಹಕಾರ ಬ್ಯಾಂಕ್, ಕಣ್ವ ಸೌಹಾರ್ದ ಸಹಕಾರ ಬ್ಯಾಂಕ್, ಬೆಳ್ಳಿ - ಬೆಳಕು ಸೌಹಾರ್ದ ಸಹಕಾರ ಬ್ಯಾಂಕ್, ಸಿರಿ -ವೈಭವ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್, ಶ್ರೀ ಶೈಲಗಿರಿ ಸೌಹಾರ್ದ ಬ್ಯಾಂಕ್‌ಗಳಿಂದ ವಂಚನೆಗೊಳಾಗದ ನೂರಾರು ಠೇವಣಿದಾರರು, ಷೇರುದಾರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net