

ಮಳವಳ್ಳಿ: ತಾಲೂಕು ಕೇಂದ್ರದ ಕೂಗಳತೆಯ ದೂರದಲ್ಲಿರುವ ಗುಳಘಟ್ಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯುದ್ದಕ್ಕೂ ಗುಂಡಿಗಳೇ ಇದ್ದು, ಜನ ಸಾಮಾನ್ಯರು ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಗ್ರಾಮಸ್ಥರು ವಿವಿಧ ಸಂಘಟನೆಗಳ ಜತೆಗೂಡಿ ಪ್ರತಿಭಟನೆ ನಡೆಸಿದರು.
ಗುಂಡಿ ಬಿದ್ದಿರುವ ರಸ್ತೆಯಲ್ಲೇ ನಿಂತು ಧರಣಿ ನಡೆಸಿದ ಹೋರಾಟಗಾರರು ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.
ಕರ್ನಾಟಕ ಪ್ರಾಂತ ರೈತ ತಾಲೂಕು ಸಂಘದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಮಳವಳ್ಳಿ ಮಖ್ಯ ರಸ್ತೆಯಿಂದ ಗುಳಘಟ್ಟ ಗ್ರಾಮದಿಂದ ದಂಡಿನ ಮರಮ್ಮನ ದೇವಸ್ಥಾನದವರೆಗೆ ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಸಿಪಿಐಎಂ ನೇತೃತ್ವದಲ್ಲಿ ಹೋರಾಟ ಮಾಡಿ ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಶೀಘ್ರವಾಗಿ ಸಮಸ್ಯೆ ಇತ್ಯರ್ಥ ಮಾಡುತ್ತೇವೆಂದು ಭರವಸೆ ನೀಡಿದ್ದರು. ಆದರೆ ಆ ಮಾತಿನಂತೆ ನಡೆದು ಕೊಳ್ಳದೆ ಬೇಜವಾಬ್ದಾರಿಯಾಗಿ ನಡೆದು ಕೊಂಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ನಗರಗಳಲ್ಲಿ ಸರ್ಕಾರಿ ಕಚೇರಿಗಳ ಭವ್ಯ ಮಹಲ್ ಕಟ್ಟುವುದು ಅಭಿವೃದ್ಧಿ ಅಲ್ಲ. ಗ್ರಾಮಗಳಿಗೆ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಶಾಲೆಗಳಿಗೆ ಶಿಕ್ಷಕರು, ಜನರಿಗೆ ಆರೋಗ್ಯ ಸೇವೆ ಸೇರಿದಂತೆ ನಿವೇಶನ ರಹಿತರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸುವುದು ಜನಸೇವೆ ಎನ್ನುತ್ತಾರೆ. ಇಂತಹ ಕೆಲಸಗಳನ್ನು ಮಾಡಿಸುವುದನ್ನು ಬಿಟ್ಟು ಕೆಲಸಕ್ಕೆ ಬಾರದ ಕಾರ್ಯಗಳಿಗೆ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಕಷ್ಟು ಅನುದಾನ ತಂದಿದ್ದೇವೆ ಎನ್ನುವ ಜನಪ್ರತಿನಿಧಿಗಳು ಈವರೆಗೂ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ಅಕಾಲಿಕ ಮಳೆಯಿಂದ ಹಾನಿಯಾಗಿರುವ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಿಸಲು ಹಾಗೂ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿಗೆ ಕ್ರಮ ವಹಿಸಲು ಮುಂದಾಗುವ ಮೂಲಕ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡಸಬೇಕಾಗುತ್ತದೆ ಎಂದು ಎನ್.ಎಲ್.ಭರತ್ ರಾಜ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಜಯಶೀಲಾ, ಸತೀಶ್, ವಿಜೇಂದ್ರ, ಶಿವಕುಮಾರ್, ಗೋಪಾಲಕೃಷ್ಣ, ಜಯೇಂದ್ರ, ಸುಂದರ್ ರಾಜ್, ಶೇಖರ್, ವಸಂತಕುಮಾರ್, ಸುನೀಲ್, ಪ್ರಶಾಂತ್, ಜಗದೀಶ್ ಸೇರಿದಂತೆ ಗುಳಘಟ್ಟ ಗ್ರಾಮಸ್ಥರು ಇದ್ದರು.