

ಶ್ರೀರಂಗಪಟ್ಟಣ: ಕಾಂಗ್ರೆಸ್ ಸರ್ಕಾರ ನಾಡಿನ ರೈತರಿಗೆ ನೇಣು ಭಾಗ್ಯ ಕರುಣಿಸಲು ಮುಂದಾಗಿದೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕುವೆಂಪು ವೃತ್ತದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಸೋಮವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ಕಡತನಾಳು ಗ್ರಾಮಸ್ಥರೊಂದಿಗೆ ನೇಣು ಕುಣಿಕೆಗಳೊಂದಿಗೆ ಮುಖ್ಯರಸ್ತೆಯಲ್ಲಿ ಬೈಕ್ ರ‌್ಯಾಲಿ ನಡೆಸಿ ಬಳಿಕ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು.
ಕರ್ನಾಟಕವನ್ನು ಆಳಿದ ಯಾವುದೇ ಪಕ್ಷಗಳ ಸರ್ಕಾರ ಕಾವೇರಿ ನೀರು ಬಳಕೆಯಲ್ಲಿ ಕನ್ನಡಿಗರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ. ಪ್ರಸ್ತುತ ಮೆಟ್ಟೂರು ಜಲಾಶಯದಲ್ಲಿ ಅಗತ್ಯ ನೀರಿನ ಸಂಗ್ರಹವಿದ್ದರೂ ತಮಿಳುನಾಡು ಸರ್ಕಾರ ರಾಜಕೀಯ ಮಾಡುತ್ತಿದೆ. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಾಮೈತ್ರಿಗೆ ಡಿಎಂಕೆ ಪಕ್ಷ ಓಲೈಸಿಕೊಳ್ಳಲು ಉದ್ದೇಶಪೂರ್ವಕವಾಗಿ ನಾಡಿನ ರೈತರ ಕೃಷಿಗೆ ನೀರು ಕೊಡದೆ, ಜನ-ಜನುವಾರುಗಳನ್ನು ಸಾಯಿಸಲು ಮುಂದಾಗಿದ್ದಾರೆ. 5 ಗ್ಯಾರಂಟಿಗಳನ್ನು ನೀಡಿದ ರಾಜ್ಯ ಸರ್ಕಾರ ಈಗ ರೈತರು ಸೇರಿದಂತೆ ಜನರಿಗೆ ನೇಣು ಭಾಗ್ಯ ಕರುಣಿಸಿದೆ ಎಂದು ಆರೋಪಿಸಿದರು.
ಪೊಲೀಸ್ ಪೇದೆ ಜತೆಗೆ ಮಾತಿನ ಚಕಮಕಿ: ರಾಷ್ಟ್ರೀಯ ಹೆದ್ದಾರಿ ವೃತ್ತದಲ್ಲಿ ನೇಣು ಕುಣಿಕೆಯ ಮೆರವಣಿಗೆ ಮೂಲಕ ಟ್ರ್ಯಾಕ್ಟರ್‌ನಲ್ಲಿ ಸಾಗುತ್ತಿದ್ದ ಪ್ರತಿಭಟನಾಕಾರರಿಗೆ ಪೊಲೀಸ್ ಪೇದೆಯೊಬ್ಬ ಬೇಗ ಬೇಗನೇ ಮುಂದೆ ಹೋಗುವಂತೆ ಗದರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರತಿಭಟನಾ ಮೆರವಣಿಗೆಯಲ್ಲಿದ್ದ ಇತರರು ತಮ್ಮವರನ್ನು ಸಮಾಧಾನಪಡಿಸಿ ಮುಂದೆ ಸಾಗಿದರು.
ಪ್ರತಿಭಟನೆಯಲ್ಲಿ ಕಡತನಾಳು ಗ್ರಾಮದ ಮುಖಂಡರಾದ ಶ್ರೀಧರ್, ಚಾಮರಾಜು, ಮಹೇಶ್, ಮಹದೇವು, ಬಾಬು, ಗಂಗಣ್ಣ, ಭೂಮಿ ತಾಯಿ ಹೋರಾಟ ಸಮಿತಿ ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಪುಟ್ಟಮಾದು, ಸಂಚಾಲಕ ಹಳುವಳ್ಳಿ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ರಾಮಚಂದ್ರು, ಪದಾಧಿಕಾರಿಗಳಾದ ದರಸಗುಪ್ಪೆ ಸುರೇಶ್, ಮಾರಸಿಂಗನಹಳ್ಳಿ ಚಿಕ್ಕತಿಮ್ಮೇಗೌಡ, ಸಿದ್ದಪ್ಪ, ಹೆಮ್ಮಿಗೆ ಕೃಷ್ಣ ಇದ್ದರು.