

ಹಾನಗಲ್ಲ: ಕಳೆದ ಐದು ವರ್ಷಗಳ ಹಿಂದೆ ಸರ್ಕಾರಿ ಶಾಸಕರ ಮಾದರಿ ಶಾಲೆಯಿಂದ ಪಡೆದುಕೊಂಡಿದ್ದ ಐದು ಕಂಪ್ಯೂಟರ್ಗಳನ್ನು ಮರಳಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಪಟ್ಟಣದ ಬಿಇಒ ಕಚೇರಿ ಎದುರು ಶುಕ್ರವಾರ ಮಧ್ಯರಾತ್ರಿವರೆಗೆ ಪ್ರತಿಭಟನೆ ನಡೆಸಿದರು.
ಬಿಇಒ ಕಚೇರಿ ಎದುರು ಪಾಲಕರು ಹಲಗೆ ವಾದ್ಯದೊಂದಿಗೆ ಕಂಪ್ಯೂಟರ್ಗಳಿಗಾಗಿ ಧರಣಿ ನಡೆಸಿ, ಹಕ್ಕೊತ್ತಾಯ ಮಂಡಿಸಿದರು. ಇದರಿಂದ ವಿಚಲಿತರಾದ ಬಿಇಒ ಆರ್.ಎನ್. ಹುರಳಿ, ನಾನು ಇಲ್ಲಿಗೆ ವರ್ಗಾವಣೆಯಾಗಿ ಬರುವ ಮೊದಲು ನಡೆದ ಘಟನೆಯಾಗಿದ್ದು, ಸಿಬ್ಬಂದಿ ಹಾಗೂ ಮೇಲಧಿಕಾರಿಗಳೊಂದಿಗೆ ರ್ಚಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ, ಇದಕ್ಕೊಪ್ಪದ ಪಾಲಕರು, 15 ದಿನಗಳ ಹಿಂದೆಯೇ ಮನವಿ ನೀಡಿದ್ದರೂ ಕ್ರಮ ಜರುಗಿಸಿಲ್ಲ. ಬಿಇಒ ಕಚೇರಿಯಿಂದ ಕಂಪ್ಯೂಟರ್ ನೀಡಬೇಕು. ಕಂಪ್ಯೂಟರ್ಗಳು ಕಚೇರಿಯಿಂದ ಮಾಯವಾಗಲು ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಂಜೆಯಾದರೂ ಅಧಿಕಾರಿಗಳು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಪಾಲಕರು ಧರಣಿ ಮುಂದುವರಿಸಿದರು.
ನಂತರ ತಡರಾತ್ರಿ 1 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ, ಶಿಕ್ಷಣ ಸಂಯೋಜಕ ಮೋಹನಕುಮಾರ ವಿದ್ಯಾರ್ಥಿಗಳ ಪಾಲಕರೊಂದಿಗೆ ಮಾತನಾಡಿ, ಸೋಮವಾರ ಕಂಪ್ಯೂಟರ್ಗಳನ್ನು ಮರಳಿಸಲಾಗುವುದು. ತಪ್ಪಿತಸ್ಥರಿಗೆ ನೋಟಿಸ್ ಜಾರಿ ಮಾಡುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಇದೆಲ್ಲದರ ನಡುವೆ ಈಗ ಬಿಇಒ ಕಚೇರಿಯಲ್ಲೂ ಕಂಪ್ಯೂಟರ್ ಮಾಯವಾಗಿದೆ ಎನ್ನಲಾಗಿದೆ. ಹಾಗಾದರೆ ಕಂಪ್ಯೂಟರ್ ಎಲ್ಲಿಗೆ ಹೋಯಿತು ? ಈ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ.