

ಶಿಗ್ಗಾಂವಿ: ಅತಿವೃಷ್ಟಿಯಿಂದ ಬಿದ್ದ ಮನೆಗೆ ಸರ್ಕಾರ ನೀಡಿರುವ ಪರಿಹಾರದ ಹಣ ಬೇರೊಬ್ಬರ ಖಾತೆಗೆ ಜಮೆಯಾಗಿದ್ದರಿಂದ ಮನೆ ಕಳೆದುಕೊಂಡ ಸಂತ್ರಸ್ತ ಪರಿಹಾರಕ್ಕೆ ಆಗ್ರಹಿಸಿ, ಗ್ರಾಪಂ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡ ಘಟನೆ ತಾಲೂಕಿನ ಬನ್ನೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕಳೆದ ವರ್ಷ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡ ಗ್ರಾಮದ ಹನುಮಂತಗೌಡ ಲಿಂಗನಗೌಡ ಹುಡೇದಗೌಡ್ರ ಎಂಬುವರಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದೆ. ಆದರೆ, ತಮ್ಮ ಖಾತೆಗೆ ಹಣ ಬಾರದ್ದರಿಂದ ಹನುಮಂತಗೌಡ ಪರಿಹಾರ ಹಣಕ್ಕೆ ಪರದಾಡುವಂತಾಗಿತ್ತು. ಸಮಸ್ಯೆ ನಿವಾರಣೆಗಾಗಿ ಕಳೆದ 8 ತಿಂಗಳಿಂದ ನಿತ್ಯ ತಹಸೀಲ್ದಾರ್ ಕಚೇರಿಗೆ ಅಲೆದಾಡಿ ಮನವಿ ಮಾಡಿದರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಬೇಸರಗೊಂಡ ಫಲಾನುಭವಿ ಹುಡೇದಗೌಡ್ರ ದಂಪತಿ, ಸ್ಥಳೀಯರ ಬೆಂಬಲದೊಂದಿಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಗ್ರಾಪಂ ಕಚೇರಿ ಮುಂದೆ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸತ್ಯಾಗ್ರಹ ಆರಂಭಿಸಿದ ಹನುಮಂತಗೌಡ, ‘ಮನೆ ಕಟ್ಟಿಕೊಳ್ಳಲು ನನ್ನ ಖಾತೆಗೆ ಸರ್ಕಾರ ಬಿಡುಗಡೆಗೊಳಿಸಿದ ಪರಿಹಾರ ಹಣ ಜಮೆಯಾಗುವವರೆಗೂ ಸತ್ಯಾಗ್ರಹ ಕೈಬಿಡಲ್ಲ. ನೆರೆಗೆ ನೆಲ ಕಚ್ಚಿದ ಮನೆ ಕಟ್ಟಿಕೊಳ್ಳಲು ಹಣಕಾಸಿನ ಸಮಸ್ಯೆಯಿದೆ. ಅಧಿಕಾರಿಗಳು ನನ್ನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸತ್ಯಾಗ್ರಹದಲ್ಲಿ ಪಾಲ್ಗೊಂಡ ಗ್ರಾಮದ ಮುಖಂಡ ಟಾಕನಗೌಡ್ರ ಪಾಟೀಲ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಫಲಾನುಭವಿ ಹನುಮಂತಗೌಡ್ರ ಹುಡೇದಗೌಡ್ರ ಅವರಿಗೆ ಬಂದ ಪರಿಹಾರ ಹಣ ಬೇರೊಬ್ಬರ ಖಾತೆಗೆ ಜಮೆಯಾಗಿದೆ. ಇದನ್ನು ಸರಿಪಡಿಸುವ ಹೊಣೆ ಅಧಿಕಾರಿಗಳ ಮೇಲಿದೆ. ಇದನ್ನು ಸರಿಪಡಿಸುವರೆಗೂ ಉಪವಾಸ ಸತ್ಯಾಗ್ರಹ ಕೈಬಿಡಲ್ಲ ಎಂದು ಎಚ್ಚರಿಸಿದರು.
ಬಸನಗೌಡ್ರ ದುಂಡಿಗೌಡ್ರ, ಫಕೀರಗೌಡ್ರ ಹುಡೇದಗೌಡ್ರ, ಈರನಗೌಡ್ರ ಹೊನ್ನಾಗೌಡ್ರ, ಮಲ್ಲೇಶ ರಾಂಪುರ ಮತ್ತಿತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಬನ್ನೂರ ಗ್ರಾಮದ ಹನುಮಂತಗೌಡ ಹುಡೇದಗೌಡ್ರ ಎಂಬುವರ ಪರಿಹಾರ ಹಣ ಶಿಗ್ಗಾಂವಿ ಪಟ್ಟಣದ ವ್ಯಕ್ತಿಯೊಬ್ಬರ ಖಾತೆಗೆ ಜಮೆಯಾಗಿದೆ. ವಾಪಸ್ ತುಂಬುವಂತೆ ಅವರ ಮನೆಗೆ ಹೋಗಿ ಮನವರಿಕೆ ಮಾಡಿದ್ದೇನೆ. ತುಂಬದಿದ್ದಲ್ಲಿ ಪುರಸಭೆಯಿಂದ ದೊರೆಯುವ ಎಲ್ಲ ಸೌಲಭ್ಯ ಕಡಿತಗೊಳಿಸಲು ಮುಖ್ಯಾಧಿಕಾರಿಗೆ ಸೂಚಿಸಿದ್ದೇನೆ. ಆಸ್ತಿ ಮೇಲೆ ಬೋಜಾ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸತ್ಯಾಗ್ರಹ ಸ್ಥಳಕ್ಕೆ ಹೋಗಿ ತ್ವರಿತಗತಿಯಲ್ಲಿ ಪರಿಹಾರ ಹಣ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇನೆ.| ಪ್ರಕಾಶ ಕುದರಿ, ತಹಸೀಲ್ದಾರ್ ಶಿಗ್ಗಾಂವಿ ಬೇರೆಯವರ ಖಾತೆಗೆ ಜಮೆಯಾದ ಪರಿಹಾರ ಹಣವನ್ನು ಹನುಮಂತಗೌಡ ಹುಡೇದಗೌಡ್ರ ಅವರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲು ಪಂಚಾಯಿತಿಯಿಂದ ಎರಡು ಪತ್ರ ಬರೆಯಲಾಗಿದೆ.| ಡಿ.ಪಿ. ಪೂಜಾರ, ಬನ್ನೂರು ಗ್ರಾಪಂ ಪಿಡಿಒ