ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ

24 HRS 03
Published on

ಹಿರೀಸಾವೆ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಗಳ ಕಾಲ ವೈದ್ಯರ ಸೇವೆ ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿ ಆಸ್ಪತ್ರೆಯ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.


ಸದ್ಯದ ಸ್ಥಿತಿಯಲ್ಲಿ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸಂಜೆ ನಂತರ ತುರ್ತು ಚಿಕಿತ್ಸೆಗೆ ವೈದ್ಯರು ಇರುವುದಿಲ್ಲ. ಕಳೆದ ವಾರ ರಾತ್ರಿ ತುರ್ತು ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತಜ್ಞ ವೈದ್ಯರ ಹುದ್ದೆಗಳು ಭರ್ತಿಯಾಗಿಲ್ಲ. ಆರು ತಿಂಗಳಿಂದ ವೈದ್ಯರು ಆಸ್ಪತ್ರೆಗೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ವಾರಕ್ಕೊಮ್ಮೆ ಬಂದರೂ ರೋಗಿಗಳೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.


ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಶೌಚಗೃಹಗಳ ಸ್ವಚ್ಛತೆ ಇಲ್ಲ. ಮೇಲ್ವಿಚಾರಕರು ಇದ್ದರೂ ಸಹ ಯಾವುದೇ ಕೆಲಸಗಳು ಆಗುತ್ತಿಲ್ಲ. ಆಸ್ಪತ್ರೆಯಲ್ಲಿ ಹೇಳವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ದೂರಿದರು.


ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯ ಅಧಿಕಾರಿ ಕಿಶೋರ್ ಕುಮಾರ್ ಮತ್ತು ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ವೈದ್ಯ ಡಾ.ಹರ್ಷಿತ್ ಅವರನ್ನು ಕಂಡ ಸಾರ್ವಜನಿಕರು, ರೋಗಿಗಳ ಮೇಲೆ ಕೂಗಾಡೋದು ಏಕೆ. ಜನರ ಸೇವೆ ಮಾಡಿ ಇಲ್ಲದಿದ್ದರೆ ಇಲ್ಲಿಂದ ಬೇರೆ ಕಡೆಗೆ ಹೋಗಿ. ಆಸಕ್ತಿ ಇರುವ ವೈದ್ಯರು ಬಂದು ಜನರಿಗೆ ಚಿಕಿತ್ಸೆ ನೀಡುತ್ತಾರೆ ಎಂದು ತರಾಟೆ ತೆಗೆದುಕೊಂಡರು. ಈ ಸಮಯದಲ್ಲಿ ತಾಲೂಕು ಆರೋಗ್ಯಾಧಿಕಾರಿ ಮಾತಿನಿಂದ ಮತ್ತೆ ಕುಪಿತರಾದ ಪ್ರತಿಭಟನಾಕಾರರು ಆಸ್ಪತ್ರೆಗೆ ಬೀಗ ಹಾಕಿಕೊಂಡು ಹೋಗಿ ಎಂದು ಧಿಕ್ಕಾರ ಕೂಗಿದರು.


ಡಿಎಚ್‌ಒ ಡಾ.ಶಿವಸ್ವಾಮಿ ಮನವಿ ಸ್ವೀಕರಿಸಿ ಮಾತನಾಡಿ, 3 ವೈದ್ಯರನ್ನು ಎರವಲು ಸೇವೆ ಮೇಲೆ ಹಾಕಲಾಗಿದೆ. ದಿನ ಪೂರ್ತಿ ಒಬ್ಬ ವೈದ್ಯರು ಕರ್ತವ್ಯ ನಿರ್ವಹಿಸುವಂತೆ 4 ವೈದ್ಯರಿಗೆ ಸೂಚನೆ ನೀಡಲಾಗಿದೆ. ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ, ಇಲಾಖೆಯ ಸೇವೆಗಳನ್ನು ಒದಗಿಸುವಂತೆ ಶೀಘ್ರ ಸಭೆ ನಡೆಸಿ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.


ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಪಿಎಲ್‌ಡಿಬಿ ನಿರ್ದೇಶಕ ಮಂಜುನಾಥ್, ಕೆಡಿಪಿ ನಾಮನಿರ್ದೇಶನ ಸದಸ್ಯ ಯೋಗೀಶ್, ಮುಖಂಡರಾದ ಎಚ್.ಎಂ.ರಘು, ರವಿಕುಮಾರ್, ಮೋಹನ್, ಕೃಷ್ಣಮೂರ್ತಿ, ಮಾರಿ ನಾಗರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ರಘು, ಕರವೇ ಮಹೇಶ್, ದಲಿತ ಸಂಘಟನೆ ಮೌರ್ಯ ಮಂಜುನಾಥ್, ಧರ್ಮಯ್ಯ, ವಿಶ್ವಕರ್ಮ ಸಂಘದ ಅಧ್ಯಕ್ಷ ನಾಗೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net