

ಶ್ರೀರಂಗಪಟ್ಟಣ: ಪೆಟ್ರೋಲ್-ಡಿಸೇಲ್ ಏರಿಕೆ ಖಂಡಿಸಿ ಪಟ್ಟಣದ ಕುವೆಂಪು ವೃತ್ತದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೆಲಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರ ಏಕಾಏಕಿ ತೈಲ ಬೆಲೆ ಏರಿಸಿ ಜನಸಾಮಾನ್ಯರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ. ಅಧಿಕಾರವಿಲ್ಲದಿದ್ದಾಗ ಒಂದು ಮಾತು, ಅಧಿಕಾರವಿದ್ದಾಗ ಮತ್ತೊಂದು ರೀತಿ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ಗ್ಯಾರಂಟಿ ಭಾಗ್ಯಗಳಿಂದ ಸರ್ಕಾರದ ಬೊಕ್ಕಸ ಬರಿದಾಗಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದೆ ಪರಿತಪಿಸುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ವಸ್ತುಗಳ ದರ ಏರಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಪ್ರತಿ ಪಕ್ಷದ ನಾಯಕರಾಗಿದ್ದಾಗ ಇಂಧನ ದರ ಏರಿಕೆ ವಿರುದ್ಧ ಪಕ್ಕದ ರಾಜ್ಯಗಳನ್ನು ಉದಾಹರಣೆ ನೀಡಿದ್ದರು. ಇಂದು ಅವರ ನೇತೃತ್ವದ ಸರ್ಕಾರ ರಾಜ್ಯವನ್ನು ನಷ್ಟದ ಸುಳಿಗೆ ದೂಡಿದೆ. ಜನರ ಬದುಕನ್ನು ಬೀದಿಗೆ ತರುವಷ್ಟರಲ್ಲಿ ನಮ್ಮ ಜನರೇ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಸುಳ್ಳಿನ ಭರವಸೆಗಳಿಗೆ ಮಣೆ ಹಾಕದೆ ಸ್ಪಷ್ಟವಾಗಿ ದೂರ ತಳ್ಳಿದ್ದಾರೆ. ಇದರಿಂದ ದ್ವೇಷದ ರಾಜಕಾರಣಕ್ಕೆ ಸರ್ಕಾರ ಮುಂದಾಗಿದೆ. ತೈಲ ದರ ಇಳಿಸದಿದ್ದಲ್ಲಿ ಇದರ ಪ್ರತಿಫಲ ಮುಂದೆ ಎದುರಿಸಲಿದೆ ಎಂದು ಹೇಳಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಸಿ.ಸಂತೋಷ್ ಕುಮಾರ್, ಪುರಸಭೆ ಮಾಜಿ ಸದಸ್ಯರಾದ ಸೋಮಶೇಖರ್, ಪುಟ್ಟರಾಮು, ಮುಖಂಡರಾದ ಉಮೇಶ್ ಕುಮಾರ್, ಗಂಜಾಂ ರಾಮಕೃಷ್ಣ, ವಿಶ್ವನಾಥ್, ಹೇಮಂತ್, ಕಿರಣ್ ಸಿಂಗ್, ಚಂದಗಾಲು ಶಂಕರ್, ಸುಧಾಕರ್, ಮಂಜುನಾಥ್ ಇದ್ದರು.