

ಗುಂಡ್ಲುಪೇಟೆ: ಬರ ಪರಿಹಾರ, ಅಧಿಕ ಗಾಳಿ ಮಳೆಯಿಂದ ಬಾಳೆ ಬೆಳೆ ಹಾನಿಗೊಳಗಾದವರಿಗೆ ಬೆಳೆ ವಿಮೆ ಹಣವನ್ನು ಖಾತೆಗೆ ಹಾಕುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಹಸಿರು ಸೇನೆ ಹಾಗೂ ರೈತ ಸಂಘ ಕಾರ್ಯಕರ್ತರು, ರೈತ ಮಹಿಳೆಯರು ಸೋಮವಾರ ಎತ್ತಿನ ಗಾಡಿಗಳೊಂದಿಗೆ ಪ್ರತಿಭಟನೆ ನಡೆಸಿದರು.
ಸೆ.14ರಿಂದ ಪಟ್ಟಣದ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರು ಸೋಮವಾರ ಬೃಹತ್ ಪ್ರತಿಭಟನೆಗೆ ಮುಂದಾದರು. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿಂದ ರೈತರಿಗೆ ಯಾವುದೆ ಬೆಳೆ ನಷ್ಟಗಳ ಪರಿಹಾರಗಳು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಮುತ್ತಿಗೆ ಹಾಕಿ ಪೊರಕೆ ಚಳವಳಿ ನಡೆಸಿ ಗಮನ ಸೆಳೆದಿದ್ದೆವು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಫಲಾನುಭವಿಗಳ ಖಾತೆಗಳಿಗೆ ಪರಿಹಾರದ ಹಣ ವರ್ಗಾಯಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತಿನ ಗಾಡಿಗಳು, ಟ್ರ್ಯಾಕ್ಟರ್ ಜತೆ ಬೀದಿಗಿಳಿದ ರೈತರಿಗೆ ರೈತ ಮಹಿಳೆಯರು ಸಾಥ್ ನೀಡಿದರು. ವರ್ಷದಿಂದ ರೈತಾಪಿ ವರ್ಗವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ನೆರವಿಗೆ ಬಾರದ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸಾರಿಗೆ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ರಚಿಸಿ ಘೋಷಣೆ ಕೂಗಿದರು. ಮಧ್ಯಾಹ್ನ ಟ್ರ್ಯಾಕ್ಟರ್‌ಗಳು ಹಾಗೂ ಎತ್ತುಗಾಡಿಗಳ ಜತೆ ತಾಲೂಕು ಕಚೇರಿಗೆ ಆಗಮಿಸಿ ಮಧ್ಯಾಹ್ನ ಅಲ್ಲಿಯೇ ಉಪಹಾರ ತಯಾರಿಸಿ ಊಟ ಮಾಡಿದರು. ನಂತರ ಧರಣಿ ಮುಂದುವರಿಸಿದರು.