ಮನೆ ಧ್ವಂಸಗೊಳಿಸಿದ ತಹಸೀಲ್ದಾರ್ ಅಮಾನತು : ಸಿಪಿಎಂ ಮುಖಂಡ ಬಿ.ಎಂ.ಭಟ್ ಆಗ್ರಹ

New Project (1)
Published on

ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ವೃದ್ಧ ದಂಪತಿಯ ಮನೆ ನೆಲಸಮಗೊಳಿಸಿದ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಅವರನ್ನು ಅಮಾನತು ಮಾಡಬೇಕು ಎಂದು ಸಿಪಿಎಂ ಮುಖಂಡ, ವಕೀಲ ಬಿ.ಎಂ.ಭಟ್ ಆಗ್ರಹಿಸಿದರು.

ಕಡಬ ತಹಸೀಲ್ದಾರ್ ಕಚೇರಿ ಮುಂಭಾಗ ಬುಧವಾರ ನೀತಿ ತಂಡದ ಅಧ್ಯಕ್ಷ ಜಯನ್ ಟಿ. ನೇತೃತ್ವದಲ್ಲಿ ಆಯೋಜಿಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.

ಭಾಷಣದುದಕ್ಕೂ ತಹಸೀಲ್ದಾರ್ ಅವರನ್ನು ಏಕವಚನದಲ್ಲಿ ಸಂಭೋದಿಸಿದ ಬಿ.ಎಂ.ಭಟ್, ತಹಸೀಲ್ದಾರರು ಕಿರಿಯರು ಎಂದು ಸಮರ್ಥಿಸಿಕೊಂಡರು. ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಯುವ ಘಟಕದ ಗ್ರಾಮೀಣ ಅಧ್ಯಕ್ಷ ಎಸ್.ಕೆ.ಹಕೀಂ, ಕೆ.ಆರ್.ಎಸ್. ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್, ದಲಿತ ಹಕ್ಕುಗಳ ಸಮಿತಿಗಳ ಅಧ್ಯಕ್ಷೆ ಈಶ್ವರಿಶಂಕರ್, ದಲಿತ ಮುಖಂಡ ಬಾಬು ಮಾತನಾಡಿದರು. ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಮುಖಂಡರು, ದಲಿತ ಸಂಘಟನೆ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿತ್ತು.

ಪುತ್ತೂರು ನಗರ ವೃತ್ತ ನಿರೀಕ್ಷಕ ಜಾನ್ಸನ್ ಡಿಸೋಜ, ಕಡಬ ಠಾಣಾ ಉಪನಿರೀಕ್ಷಕರಾದ ಅಭಿನಂದನ್, ಅಕ್ಷಯ ಡವಗಿ ನೇತೃತ್ವದಲ್ಲಿ ಸುಳ್ಯ, ಉಪ್ಪಿನಂಗಡಿ, ಪುತ್ತೂರು ಠಾಣೆಯ ಪೊಲೀಸರು ಬಂದೋಬಸ್ತ್ ಒದಗಿಸಿದರು.

ಜೀವನವೇ ಬೇಡವೆಂದ ವೃದ್ಧ

ಆರಂಭದಲಿ ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಪ್ರತಿಭಟನಕಾರರು ಆಕ್ರೋಶಿತರಾಗಿ ರಸ್ತೆ ಸಮೀಪ ಗುಂಪು ಸೇರಿದ್ದರು. ಸಂತ್ರಸ್ತರಾದ ರಾಧಮ್ಮ ಮತ್ತು ಮುತ್ತುಸ್ವಾಮಿ, ಪುತ್ರಿ ರೇಣುಕಾ ಜತೆಗಿದ್ದರು. ವೃದ್ಧ ನನಗೆ ಜೀವನವೇ ಬೇಡ ಎಂದು ನೆಲದಲ್ಲಿ ಒದ್ದಾಡಿದರು. ಪೊಲೀಸರು ಆಡಳಿತ ಸೌಧಕ್ಕೆ ತೆರಳುವ ರಸ್ತೆಗೆ ಬ್ಯಾರಿಕೇಡ್ ಹಾಕಿ ಮುಚ್ಚಿದ್ದರು. ಬ್ಯಾರಿಕೇಡ್ ಪಕ್ಕದಲ್ಲಿ ನಜ್ಜುಗುಜ್ಜಾದ ಪಾತ್ರೆ ಮುಂದಿಟ್ಟು ಉರಿ ಬಿಸಿಲಿನಲ್ಲೇ ಪ್ರತಿಭಟನೆ ನಡೆಯಿತು. ವೃದ್ಧ ಮುತ್ತುಸ್ವಾಮಿ ಕುಸಿದು ಬಿದ್ದರು.

ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಭರವಸೆ

ಪ್ರತಿಭಟನಾ ಸಭೆ ಬಳಿಕ ಅಲ್ಲೆ ಟರ್ಪಾಲು ಹಾಕಿ ಕುಳಿತು ಪ್ರತಿಟಭಟಿಸಲಾಯಿತು. ಮಧ್ಯಾಹ್ನದ ಬಳಿಕ ಪ್ರತಿಭಟನೆ ನಿರತ ಕೆಲವು ಮುಖಂಡರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರನ್ನು ಭೇಟಿಯಾಗಿ ಮನವಿ ನೀಡಿದರು. ಮನವಿ ಸ್ವೀಕರಿಸಿದ ಎ.ಸಿ. ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡುವ ಬಗ್ಗೆ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಮುಖಂಡರು ಮಾಹಿತಿ ನೀಡಿ ಪ್ರತಿಭಟನೆ ವಾಪಸ್ ಪಡೆದರು.

ಮುಖಂಡನಿಗೆ ಚಪ್ಪಲಿ ಎತ್ತಿದ ಮಹಿಳೆ

ಪ್ರತಿಭಟನಾಕಾರು ಪಿಕಪ್ ಒಂದರಲ್ಲಿ ನುಜ್ಜುಗುಜ್ಜಾದ ಪಾತ್ರೆ, ಸರಂಜಾಮು ತಂದಿದ್ದು ಪೊಲೀಸರು ಪಿಕಪನ್ನು ವಶಕ್ಕೆ ತೆಗೆದು ಠಾಣೆಯಲ್ಲಿ ಇರಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು. ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡ ರಾಯ್ ಅಬ್ರಾಹಂ ಆಗಮಿಸಿ, ತಹಸೀಲ್ದಾರ್ ಅವರಿಗೆ ಏಕವಚನ ಬಳಸಿದ ಬಗ್ಗೆ ಆಕ್ಷೇಪಿಸಿದರು. ಈ ವೇಳೆ ವಾಗ್ವಾದ ನಡೆದಾಗ ಪೊಲೀಸರು ಮಧ್ಯ ಪ್ರವೇಶಿಸಿ ರಾಯ್ ಅಬ್ರಾಹಂ ಅವರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರು. ಕೆಲ ಹೊತ್ತಿನ ಬಳಿಕ ಮತ್ತೆ ಆಗಮಿಸಿದ ರಾಯ್ ಅಬ್ರಾಹಂ ಅವರ ಮಹಿಳೆಯೋರ್ವರು ವಾಗ್ವಾದ ಮಾಡಿ ತನ್ನ ಚಪ್ಪಲಿ ತೆಗೆಯುವ ಹಂತಕ್ಕೆ ತಲುಪಿದ್ದರು. ಪೊಲೀಸರು ಆಕೆಯನ್ನು ತಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net