೧೦ ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ - ವಿಟ್ಲದ ಮಂಕುಡೆಯಲ್ಲಿ ಹಾಡಹಗಲೇ ಘಟನೆ

PTR_19 NOV_5
Published on

ವಿಟ್ಲ: ಮಂಕುಡೆಯಲ್ಲಿ ಹಾಡಹಗಲೇ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ೧೦ ಲಕ್ಷ ರೂ.ಗೂ ಅಽಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ಕಲ್ಕಜೆ ನಿವಾಸಿ ಗಣೇಶ್ ಶೆಟ್ಟಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಗಣೇಶ್ ಕೆಲಸಕ್ಕೆ ತೆರಳಿದ್ದು, ಪತ್ನಿ ಮಧ್ಯಾಹ್ನ ೧೨.೪೫ರ ಸುಮಾರಿಗೆ ವಿಟ್ಲಕ್ಕೆ ಸಂತೆಗೆ ಹೋಗಿ ೨ಗಂಟೆಗೆ ಹಿಂದಿರುಗಿದ್ದಾರೆ. ಈ ನಡುವೆ ಕಳ್ಳತನ ನಡೆದಿದೆ.

ಕಳ್ಳರು ಎರಡು ಕಪಾಟುಗಳ ಬೀಗ ಮುರಿದು ಜಾಲಾಡಿದ್ದು, ಚಿನ್ನಾಭರಣ ಇಟ್ಟಿದ್ದ ಪೆಟ್ಟಿಗೆಯನ್ನು ಅಡುಗೆ ಕೋಣೆಗೆ ತೆಗೆದುಕೊಂಡು ಹೋಗಿ ಚೂರಿ ಬಳಸಿ ತೆರೆದಿದ್ದಾರೆ. ಮರದ ಪೆಟ್ಟಿಗೆಯಲ್ಲಿ ಇಟ್ಟಿದ್ದ ಸುಮಾರು ೯೩ ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಹಳೆಯ ಚಿನ್ನಾಭರಣವನ್ನೂ ದೋಚಿದ್ದಾರೆ. ಸುಮಾರು ೧ ಗಂಟೆ ಸಮಯದಲ್ಲಿ ಕೃತ್ಯ ನಡೆಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಂಟ್ವಾಳ ಉಪವಿಭಾಗ ಪೊಲೀಸ್ ಉಪಾಽಕ್ಷಕ ಎಸ್. ವಿಜಯ ಪ್ರಸಾದ್, ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಶ್ವಾನದಳ ಮನೆಗೆ ಒಂದು ಸುತ್ತು ಹೊಡೆದು, ಮನೆ ಮುಂಭಾಗದ ಡಾಂಬರು ರಸ್ತೆಯವರೆಗೆ ತೆರಳಿ ಹಿಂತಿರುಗಿದೆ. ಕೇರಳ ಮೂಲದ ವಾಹನವೊಂದು ಮನೆಯ ಸಮೀಪ ಓಡಾಡಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net