26ರಂದು ಹನೂರಿನಲ್ಲಿ ಬೃಹತ್ ಪ್ರತಿಭಟನೆ

Published on

ಹನೂರು: ತಾಲೂಕಿನ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಸೆ.26 ರಂದು ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಹನೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ತಿಳಿಸಿದರು.


ತಾಲೂಕಿನ ಡಿ.ಎಂ ಸಮುದ್ರ ಭಾಗದ ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಹುಬ್ಬೆಹುಣಸೆ, ರಾಮನಗುಡ್ಡೆ ಹಾಗೂ ಉಡುತೊರೆ ಜಲಾಶಯಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವುದು. ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಕೆರೆಗಳಲ್ಲಿ ಹೂಳೆತ್ತುವುದು. ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವುದು ಸೇರಿದಂತೆ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಘಟನೆ ವತಿಯಿಂದ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳು ನೀಡಿದ್ದ ಭರವಸೆಯನ್ನು ಈವರೆಗೂ ಈಡೇರಿಸಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಅಗತ್ಯ ಮೂಲಸೌಕರ್ಯವನ್ನು ಪಡೆಯುವುದು ನಮ್ಮ ಹಕ್ಕು. ಹಾಗಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಗ್ರಾಮ ಘಟಕದ ಅಧ್ಯಕ್ಷ ಎಸ್.ಮಾದಪ್ಪ ಮಾತನಾಡಿ, ತಹಸೀಲ್ದಾರ್ ಕಚೇರಿಯ ಅಭಿಲೇಖನಾಲಯ (ರೆಕಾರ್ಡ್ ರೂಂ) ಕಚೇರಿಯಲ್ಲಿ ಕಳ್ಳತನವಾಗಿ ಹಲವು ತಿಂಗಳಾಗಿದೆ. ಆದರೆ, ತಪ್ಪಿತಸ್ಥರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇನ್ನು ಇಲ್ಲಿ ದಾಖಲೆಗಳನ್ನು ಪಡೆಯಬೇಕಾದರೆ ರೈತರಿಂದ ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.


ರೈತ ಮುಖಂಡರಾದ ಮಹದೇವಶೆಟ್ಟಿ, ಬಾಲರಾಜು, ನಟರಾಜು, ರಾಜು, ವೀರಭದ್ರೇಗೌಡ, ಗುರುಮಲ್ಲಪ್ಪ, ನಂದೀಶ್, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net