ಖಾಲಿ ಕೊಡ ಹಿಡಿದು ಗ್ರಾಪಂ ಎದುರು ಪ್ರತಿಭಟನೆ

13 yelandur 06
Published on

ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು, ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.


ಗ್ರಾಮದಲ್ಲಿ ಈಗಾಗಲೇ ಕೊಂಡೋತ್ಸವ ಗ್ರಾಮದ ದೇವತೆಗಳ ಹಬ್ಬ ಆರಂಭಗೊಂಡಿದೆ. ಪ್ರತಿ ವರ್ಷವೂ ಈ ಸಮಯದಲ್ಲೇ ಕೊಳವೆ ಬಾವಿ ರಿಪೇರಿ ಎಂಬ ನೆಪವೊಡ್ಡಿ ನೀರಿಗೆ ಹಾಹಾಕಾರವಾಗುತ್ತದೆ. ಕಳೆದ ಒಂದೂವರೆ ತಿಂಗಳಿಂದಲೂ ಕುಡಿಯುವ ನೀರನ್ನು ಸಮಪರ್ಕವಾಗಿ ಸರಬರಾಜು ಮಾಡುತ್ತಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನಲ್ಲಿಯನ್ನು ಹಾಕಲಾಗಿದ್ದರೂ ಇದಕ್ಕೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಇಲ್ಲದಿದ್ದರೆ ಇಲ್ಲಿ ನೀರು ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಇಲ್ಲಿನ ಪಂಚಾಯಿತಿ ಸಿಬ್ಬಂದಿ ನೀರಿನ ಕೊಳವೆ ಬಾವಿ ಕೆಟ್ಟಿದೆ, ಪೈಪ್ ಒಡೆದಿದೆ ಎಂಬ ನೆಪವೊಡ್ಡಿ ಬಿಲ್ ಮಾಡಿಕೊಳ್ಳಲು ಪ್ರತಿ ವರ್ಷವೂ ಇದೇ ಸಮಸ್ಯೆಯನ್ನು ಸ್ವಯಂಪ್ರೇರಿತವಾಗಿ ತಂದೊಡ್ಡುತ್ತಾರೆ. ಸಂಬಂಧಪಟ್ಟ ಉನ್ನತಮಟ್ಟದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಗ್ರಾಮಕ್ಕೆ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


ಪಿಡಿಒ ಮಹೇಶ್ ಮಾತನಾಡಿ, ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಯಲ್ಲಿದ್ದ ಮರವನ್ನು ಕಡಿಯಲಾಗಿದ್ದು ಇದನ್ನು ತೆರವುಗೊಳಿಸಿಲ್ಲ. ಹಾಗಾಗಿ ಪೈಪ್‌ಲೈನ್ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಂಬಂಧಪಟ್ಟ ಹೆದ್ದಾರಿ ಅಧಿಕಾರಿಗಳಿಗೆ ಮರ ತೆರವುಗೊಳಿಸುವಂತೆ ಮನವಿ ಮಾಡಲಾಗಿದ್ದು, ಈ ಸಮಸ್ಯೆಯನ್ನು ಆದಷ್ಟು ಬೇಗ ನೀಗಿಸಲು ಕ್ರಮ ವಹಿಸಲಾಗುವುದು ಎಂದರು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಗ್ರಾಮದ ಮೀನಾಕ್ಷಿ, ಗೌರಮ್ಮ, ಮಹದೇವಶೆಟ್ಟಿ, ಸಾಕಮ್ಮ, ರಾಜಮ್ಮ, ಲಕ್ಷ್ಮಮ್ಮ, ಭಾಗ್ಯ, ಮಂಗಳಮ್ಮ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net