9ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ

HUN-DEC-5-3(SUB REGISTRAR OFF ISSUE)
ಹುಣಸೂರಿನಲ್ಲಿ ವಿವಿಧ ವರ್ತಕರು, ಪತ್ರ ಬರಹಗಾರರು ಸಭೆ ಆಯೋಜಿಸಲಾಗಿತ್ತು. ಸತ್ಯಪ್ಪ, ರಮೇಶ್, ಪ್ರಕಾಶ್, ಗಣೇಶ್ ಇದ್ದರು.
Published on

ಹುಣಸೂರು: ಹುಣಸೂರಿನ ಉಪನೋಂದಣಾಧಿಕಾರಿ ಕಚೇರಿಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ಡಿ.9ರಂದು ತಾಲೂಕು ಕಚೇರಿ ಮುಂಭಾಗ ಸತ್ಯ ಎಂಎಎಸ್ ಫೌಂಡೇಶನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವುದಾಗಿ ಪತ್ರಬರಹಗಾರರ ಸಂಘ, ಅಂಗಡಿ ಮಾಲೀಕರ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳು ನಿರ್ಣಯಿಸಿವೆ.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ಉಪನೋಂದಣಾಧಿಕಾರಿ ಕಚೇರಿಯನ್ನು ದುರುದ್ದೇಶಪೂರಿತವಾಗಿ ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತಿದ್ದು, ಇದರಿಂದಾಗಿ ಇಲ್ಲಿ ಅಂಗಡಿ ವ್ಯವಹಾರಗಳನ್ನು ನಡೆಸುತ್ತಿರುವ 60ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ. ಉಪನೋಂದಣಾಧಿಕಾರಿಗಳ ಕಚೇರಿಯು ಹುಣಸೂರು ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿದ್ದು, ಪ್ರತಿದಿನ ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಬರುತ್ತಿರುವುದರಿಂದ ಸುತ್ತಮುತ್ತಲ ಜೆರಾಕ್ಸ್ ಅಂಗಡಿಗಳು, ಪತ್ರ ಬರಹಗಾರರು, ರಸ್ತೆ ಬದಿಯಲ್ಲಿ ಟೀ ಮಾರಾಟ ಮಾಡುವ ಅಂಗಡಿಗಳು, ಕೆಲವು ಹೋಟೆಲ್‌ಗಳ ವ್ಯಾಪಾರ ವಹಿವಾಟು ಯಾವುದೇ ಗೊಂದಲವಿಲ್ಲದೆ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ತಾಲೂಕು ಕಚೇರಿ ಸಂಕೀರ್ಣದಲ್ಲಿ ತಹಸೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ನೋಂದಣಿ ಮುದ್ರಾಂಕ ಕಚೇರಿ, ಆಹಾರ ನಿರೀಕ್ಷಕರ ಕಚೇರಿ ಮುಂತಾದವುಗಳು ಇದ್ದು, ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ. ಅದರೆ ಇದೀಗ ಕಚೇರಿಯನ್ನು ಒಂದೂವರೆ ಕಿ.ಮೀ. ದೂರದಲ್ಲಿರುವ ಅರಸು ಪುತ್ಥಳಿ ವೃತ್ತದ ಬಳಿ ಇರುವ ಖಾಸಗಿ ಮಳಿಗೆಗೆ ಸ್ಥಳಾಂತರಿಸಲು ಉಪನೋಂದಣಾಧಿಕಾರಿ ಕಚೇರಿ ಮುಂದಾಗಿದೆ. ಇದರಿಂದ ಸಾರ್ವಜನಿಕರಿಗೂ ಅನಾನುಕೂಲವಾಗಲಿದೆ. ಯಾವುದೇ ಕಾರಣಕ್ಕೂ ಕಚೇರಿಯ ಸ್ಥಳಾಂತರವಾಗದಂತೆ ಕ್ರಮವಹಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ವರ್ತಕರಾದ ರಮೇಶ, ಪ್ರಕಾಶ, ಕುಮಾರ, ಗಣೇಶ, ಗೋವಿಂದಯ್ಯ, ಮಾದಯ್ಯ ಪತ್ರಬರಹಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net