

ಜಗಳೂರು: ತಾಲೂಕಿನ ಕೃಷಿ ಪಂಪ್ಸೆಟ್ಗಳಿಗೆ ಹಗಲಿನಲ್ಲಿ ಏಳು ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಬುಧವಾರ ಬೆಸ್ಕಾಂ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ಪ್ರತಿಭಟನೆ ನಡೆಯಿತು.
ಸಿದ್ದಮ್ಮನಹಳ್ಳಿ, ತಿಮ್ಲಾಪುರ, ಕಾಮಗೇತನಹಳ್ಳಿ, ಹೊಸಹಟ್ಟಿ, ಅಣಬೂರು ಸೇರಿ ವಿವಿಧ ಗ್ರಾಮಗಳ ರೈತರು ಬೆಸ್ಕಾಂ ಕಚೇರಿ ಮುಂದೆ ಕುಳಿತು ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.
ರಾತ್ರಿ 10 ರಿಂದ 2 ಮತ್ತು ಬೆಳಗಿನ ಜಾವ 2 ರಿಂದ 6 ಗಂಟೆವರೆಗೆ ವಿದ್ಯುತ್ ಪೂರೈಕೆ ಮಾಡುವುದರಿಂದ ರಾತ್ರಿ ನೀರು ಹಾಯಿಸಲು ರೈತರು ಜಮೀನುಗಳಿಗೆ ಹೋಗಬೇಕಾಗುತ್ತದೆ. ರಾತ್ರಿ ವೇಳೆ ಕರಡಿ, ಚಿರತೆ, ಕತ್ತೆಕಿರುಬ ಸೇರಿ ಅನೇಕ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ಬೇಸಿಗೆ ಆರಂಭವಾಗಿದ್ದು, ಅಡಕೆ, ರಾಗಿ, ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ನೀರು ಹಾಯಿಸಲು ರಾತ್ರಿ ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಂಜೆ 6 ರಿಂದ 10 ಗಂಟೆಯವರೆಗೆ ವಿದ್ಯುತ್ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಮುಖಂಡ ಬಿ. ಕುಮಾರ್ ಭರಮಸಮುದ್ರ ಮಾತನಾಡಿ, ರೈತರು ಹೆಂಡತಿ, ಮಕ್ಕಳನ್ನು ಬಿಟ್ಟು ರಾತ್ರಿವೇಳೆ ಬೆಳೆಗಳಿಗೆ ನೀರು ಹಾಯಿಸಲು ಹೋಗುವುದು ಕಷ್ಟವಾಗಿದೆ. ಅಲ್ಲದೆ ಪ್ರಾಣಿಗಳ ಆತಂಕ, ಅನಾರೋಗ್ಯದ ಸಮಸ್ಯೆ ಕಾಡುತ್ತದೆ. ಕೂಡಲೇ ನಿಯಮ ಬದಲಿಸಿ ಹಗಲಿನಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದರು.
ಮನವಿ ಸ್ವೀಕರಿಸಿದ ಬೆಸ್ಕಾಂ ಎಇಇ ಸುಧಾಮಣಿ, ಹಿರೇಮೇಮಲ್ಲನಹೊಳೆ ಎಫ್7, ಎಫ್8 ರಲ್ಲಿ ಎಲ್ಲೆಲ್ಲಿ ಸಾಧ್ಯತೆಯಿದೆಯೋ ಅಲ್ಲಿ ರಾತ್ರಿಯ ಬದಲು ಹಗಲು ವಿದ್ಯುತ್ ನೀಡಲಾಗುವುದು. ಇಲ್ಲವೇ ಸಂಜೆ ವೇಳೆ ವಿದ್ಯುತ್ ನೀಡಲು ವಿಭಾಗೀಯ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ಕೆ. ಬಸವರಾಜ್, ರೈತ ಮುಖಂಡರಾದ ಲೋಕೇಶ್, ಎ.ಎಂ. ಮಹಾಂತೇಶ್, ತಿಪ್ಪೇಸ್ವಾಮಿ, ಎಸ್.ಎಂ. ಜಗದೀಶ್, ಎ.ಡಿ. ಚನ್ನಪ್ಪ, ಕೆ.ಬಿ. ತಿಪ್ಪೇಸ್ವಾಮಿ, ಸೂರಪ್ಪ, ಮಧು, ಬಸವರಾಜ್, ಶಾಮರಾಜ್, ಮಹಾಲಿಂಗಪ್ಪ, ಮಂಗಳಮ್ಮ, ಭಾರತಮ್ಮ, ಶಿವನಮ್ಮ, ಮಂಜುನಾಥ್ ಮತ್ತಿತರರಿದ್ದರು.