ಸ್ಮಶಾನಕ್ಕಾಗಿ ದೊಡ್ಡಾಲಹಳ್ಳಿಯಲ್ಲಿ ಪ್ರತಿಭಟನೆ

img_1897-1.jpg
Published on

ಕನಕಪುರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಗ್ರಾಮ ದೊಡ್ಡಾಲಹಳ್ಳಿಯ 1ನೇ ವಾರ್ಡ್ ಹನುಮಂತನಗರ ಕಾಲೋನಿ ಮೃತಪಟ್ಟ ವ್ಯಕ್ತಿಗೆ ಸ್ಮಶಾನ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಬುಧವಾರ ದೊಡ್ಡಾಲಹಳ್ಳಿ ಹನುಮಂತನಗರದ ತಮಟೆ ಕಲಾವಿದ ಗಿರೀಶ್(29) ಎಂಬಾತ ಅನಾರೋಗ್ಯದಿಂದ ಮೃತಪಟ್ಟರು. ಆದರೆ ದಲಿತ ಸಮುದಾಯದ ಯಾರೇ ಮೃತಪಟ್ಟಾಗ ಶವಸಂಸ್ಕಾರಕ್ಕೆ ಸ್ಥಳವಿಲ್ಲವೆಂದು ಆರೋಪಿಸಿ ಗ್ರಾಮಸ್ಥರು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಾಚಿಕೆಗೇಡು: ದೇಶ ರಾಜ್ಯವನ್ನಾಳುತ್ತಿರುವ ರಾಜಕಾರಣಿಗಳ ಅಸಡ್ಡೆ ಮತ್ತು ಅಧಿಕಾರಿಗಳ ಬೇಜವಬ್ದಾರಿಯಿಂದ ಪರಿಶಿಷ್ಟ ಜಾತಿಯವರು ಮೃತಪಟ್ಟರೆ ಅಂತ್ಯ ಸಂಸ್ಕಾರ ನೆರವೇರಿಸಲು ಸ್ಮಶಾನ ಸೌಲಭ್ಯ ಕಲ್ಪಿಸಲು ಪರದಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಗ್ರಾಮಸ್ಥರು ಆರೋಪಿಸಿದರು.
ಕಾಲೋನಿಯ ಬಿ.ಎಸ್.ಪಿ ಮುಖಂಡರಾದ ನಾಗೇಶ್, ವೆಂಕಟಾಚಲ, ಗ್ರಾಮದ ಕೆಲವರು ಮಾತನಾಡಿ, ದೊಡ್ಡಾಲಹಳ್ಳಿಯ ವಾರ್ಡ್ ನಂ.1ರ ಹನುಮಂತನಗರದಲ್ಲಿ 300ಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದೇವೆ. ಬಹಳ ವರ್ಷಗಳಿಂದಲೂ ನಮಗೆ ಸ್ಮಶಾನದ ಸೌಲಭ್ಯವಿಲ್ಲ, ಅಲ್ಲಿಇಲ್ಲಿ ಗೋಮಾಳ ಸೇರಿದಂತೆ ಬೇರೆಯವರ ಜಮೀನುಗಳಲ್ಲಿ ಶವಸಂಸ್ಕಾರ ನಡೆಸುತ್ತಾ ಬಂದಿದ್ದೇವೆ, ಈ ಸಂಬಂದ ೨೦೧೪ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಿಗೆ ಮಾಡಿದ ಮನವಿಯ ಹಿನ್ನೆಲೆಯಲ್ಲಿ ತಾಲೂಕು ಆಡಳಿತಕ್ಕೆ ಸ್ಥಳ ನಿಗಧಿಪಡಿಸುವಂತೆ ಆದೇಶ ಮಾಡಿದ ಹಿನ್ನಲೆಯಲ್ಲಿ ಸರ್ಕಾರಿ ಗೋಮಾಳದಲ್ಲಿ 111ರ ಎಕರೆ ವಿಸ್ತೀರ್ಣದಲ್ಲಿ ಬೆಟ್ಟ ಕಲ್ಲು ಬಂಡೆಗಳ ನಡುವೆ ಯೋಗ್ಯವಲ್ಲದ, 1 ಎಕರೆ ಮಂಜೂರು ಮಾಡಿದ್ದಾರೆ. ಈ ಸ್ಥಳವು ಕಲ್ಲು ಪ್ರದೇಶವಾಗಿರುವುದರಿಂದ ಶವ ಸಂಸ್ಕಾರ ಮಾಡಲು ಆಗುತ್ತಿಲ್ಲ.
ಗ್ರಾಮದಲ್ಲಿ ಸರ್ಕಾರದ ವತಿಯಿಂದ 3 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ಉತ್ತಮ ಸ್ಮಶಾನ ನಿರ್ಮಾಣ ಮಾಡಿದ್ದರೂ ಆ ಸ್ಥಳಕ್ಕೆ ದಲಿತರ ಶವ ಸಂಸ್ಕಾರ ಮಾಡಲು ಬಿಡುವುದಿಲ್ಲ, ಕೂಡಲೇ ಸರ್ಕಾರ ನಮಗೆ ಸ್ಮಾಶನಕ್ಕೆ ಜಾಗ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಸರ್ಕಾರಿ ಗೋಮಾಳದಲ್ಲಿನ ೧೧೧ ಎಕರೆ ವಿಸ್ತೀರ್ಣದಲ್ಲಿರುವ ಕಲ್ಲುಗಣಿಗಾರಿಕೆ ನಡೆಸಲು ಅನುಕೂಲವಾಗುವಂತೆ ಪರಿಶಿಷ್ಠ ಜಾತಿಯ ಜನಾಂಗದವರಿಗೆ ಸ್ಮಶಾನ ನಿರ್ಮಾಣ ಮಾಡುವ ನೆಪದಲ್ಲಿ ಈ ಸ್ಥಳದಲ್ಲಿ ಸ್ಮಶಾನವನ್ನು ನೀಡಿ ಕಲ್ಲುಗಣಿಗಾರಿಕೆ ನಡೆಸುವ ಹುನ್ನಾರ ನಡೆಸಿದ್ದಾರೆ. ನಾವುಗಳು ಇದಕ್ಕೆ ತಕರಾರು ಮಾಡಿದ ಹಿನ್ನೆಲಯಲ್ಲಿ ರ‍್ಯಾಯ ಸ್ಮಾಶಾನ ಜಾಗ ಕಲ್ಪಿಸಲು ಮೀನಾಮೇಷ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದ ಸಂವಿಧಾನದ ಅಡಿ ಸ್ಮಶಾನ ಸೌಲಭ್ಯ ಕಲ್ಪಿಸದೆ ಇರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಲಿಂಗೇಗೌಡ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜೆ.ಸಿ.ಬಿ ಯಂತ್ರಗಳಿಂದ ಕಲ್ಲುಗಳನ್ನು ತೆರವುಗೊಳಿಸಿ ಶವಸಂಸ್ಕಾರಕ್ಕೆ ಅನುವುಮಾಡಿಕೊಟ್ಟರು.

ಶಾಶ್ವತ ಪರಿಹಾರ ಮಾಡಬೇಕೆಂದು ಆ ಸ್ಥಳವನ್ನು ನಿರಾಕರಿಸಲಾಯಿತು. ಸರ್ವೆ ನಂ.116ರ ಸಮೀಪದ ಶೇಷಗಿರಿ ರಾವ್ ರವರ ಜಮೀನಿನಲ್ಲಿ ತಾತ್ಕಾಲಿಕ ಸ್ಥಳ ನಿಗಧಿ ಪಡಿಸಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಡಲಾಯಿತು.
ಬಿ.ಎಸ್.ಪಿ ಜಿಲ್ಲಾ ಸಂಯೋಜಕ ಸುರೇಶ್, ಗ್ರಾಮದ ಚಿಕ್ಕವೆಂಕಟಯ್ಯ, ವೆಂಕಟಮುದ್ದಯ್ಯ, ಗೋವಿಂದರಾಜು, ರಮೇಶ್, ನಾಗರಾಜು, ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net