ವಕ್ಫ್ ವಿವಾದ ಖಂಡಿಸಿ ಬೇಲೂರಿನಲ್ಲಿ ಪ್ರತಿಭಟನೆ

ವಕ್ಫ್ ವಿವಾದ ಖಂಡಿಸಿ ಬೇಲೂರಿನಲ್ಲಿ ಪ್ರತಿಭಟನೆ
Published on

ಬೇಲೂರು: ತಾಲೂಕಿನ ಘಟ್ಟದಹಳ್ಳಿ ಸರ್ಕಾರಿ ಶಾಲೆಗೆ ಸೇರಿದ ಜಾಗ ವಕ್ಫ್ ಹೆಸರಿನಲ್ಲಿ ತೋರಿಸುತ್ತಿದ್ದು, ಇದನ್ನು ಖಂಡಿಸಿ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪಟ್ಟಣದ ನೆಹರು ನಗರದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಹಸೀಲ್ದಾರ್ ಮಮತಾಗೆ ಮನವಿ ಸಲ್ಲಿಸಿದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ ವಕ್ಫ್ ಭೂ ವಿವಾದ ದೊಡ್ಡ ಸುದ್ದಿಯಾಗಿದೆ. ಆದರೂ ಸಹ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಜತೆಗೆ ಬೇಲೂರು ವಿಧಾನಸಭಾ ಕ್ಷೇತ್ರದ ಹಳೆಬೀಡು ಹೋಬಳಿಯ ಘಟ್ಟದಳ್ಳಿ ಗ್ರಾಮದ ಸರ್ವೇ ನಂಬರ್ 435 ರಲ್ಲಿ 38 ಗುಂಟೆ ಜಾಗವನ್ನು ದಾನಿಗಳು ಭೂದಾನ ನೀಡಿ, ಇದರ ಜತೆಗೆ ದೇವಾಲಯ, ರುದ್ರಭೂಮಿ ಸೇರಿದಂತೆ ಇನ್ನಿತರ 590, 2,639, 8,589 ನಂಬರ್ ಅಲ್ಲದೆ ಕಳ್ಳಿಬೋರೆ ಕಾವಲು ಸರ್ವೇ ನಂ.75 ರಲ್ಲೂ ಹಿಂದು ರುದ್ರಭೂಮಿಗೆ ಮೀಸಲಿದ್ದ ಜಾಗವನ್ನು 3 ವರ್ಷಗಳ ಹಿಂದೆ ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸಿದ್ದು, ಇದಕ್ಕೆ ಯಾರು ಹೊಣೆ. ರೈತರ ಭೂಮಿ, ದಲಿತರ ಭೂಮಿ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದ ಭೂಮಿಯನ್ನು ಸಹ ಬಿಡದೆ ಕಬಳಿಸಿದ್ದಾರೆ. ಈಗ ರೈತರು ತಮ್ಮ ಯಾವ ಭೂಮಿ ಯಾರ ಹೆಸರಿನಲ್ಲಿದೆ ಎಂದು ಭಯ ಭೀತರಾಗಿದ್ದಾರೆ. 2012ರಲ್ಲಿದ್ದ ಶಾಲೆ, ರುದ್ರಭೂಮಿ, ದೇವಾಲಯ ಜಾಗ 2019-20 ರಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ಎಲ್ಲ ಸಮಾಜಕ್ಕೂ ದ್ರೋಹ ಮಾಡುತ್ತಿದೆ. ಇದರ ಹಿಂದಿರುವ ಜಮೀರ್ ಅಹಮದ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ವಕ್ಫ್ ಬೋರ್ಡ್‌ಗೆ ಖಾತೆಯಾಗಿರುವ ಭೂಮಿ ರದ್ದುಗೊಳಿಸಬೇಕು. ಬೇಲೂರು ದೇವಾಲಯದ ಆಸ್ತಿಯನ್ನೂ ಇತರರು ಅಕ್ರಮ ಖಾತೆ ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಅದರ ವಿರುದ್ಧವೂ ಪ್ರತಿಭಟಿಸಿ ಆಸ್ತಿ ಬಿಡಿಸಲಾಗುವುದು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜಯ್ ಮಾತನಾಡಿ, ವಕ್ಫ್ ಬೋರ್ಡ್‌ನಿಂದ ಆಸ್ತಿಗಳು ರದ್ದಾಗುವ ತನಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರೇಣುಕುಮಾರ್, ಶೋಭಾ ಗಣೇಶ್, ಮೋಹನ್, ಭರತ್, ಶ್ರೀನಿವಾಸ್, ಜಿ.ಕೆ.ಕುಮಾರ್, ಸಿ.ಎಚ್.ಪ್ರಕಾಶ್, ರಮೇಶ್ ಸುವರ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net