ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಕ್ಕೆ ಪ್ರತಿಭಟನೆ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಕ್ಕೆ ಪ್ರತಿಭಟನೆ
Published on

ಗೋಣಿಕೊಪ್ಪ: ಕಮಿಷನ್ ದಂಧೆ ನಡೆಸುತ್ತಿದ್ದ ಬಿಜೆಪಿ ಸರ್ಕಾರವನ್ನು ಜನ ಮನೆಗೆ ಕಳುಹಿಸಿದ್ದಾರೆ. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಪಾರದರ್ಶಕ ಆಡಳಿತ ನೀಡುತ್ತಿದ್ದು, ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಿದ ಕಾರಣಕ್ಕಾಗಿ ನಮ್ಮ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ್ದಾರೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಶನಿವಾರ ಗೋಣಿಕೊಪ್ಪಲು-ಅರ‌್ವತ್ತೊಕ್ಕಲು ಸಂಪರ್ಕ ಸೇತುವೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹುದಿಕೇರಿ ಸಹಕಾರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿರುವುದು ಗಮನಕ್ಕೆ ಬಂದಿದೆ. ಅವ್ಯವಹಾರದ ಬಗ್ಗೆ ಪ್ರಶ್ನಿಸುವುದೇ ತಪ್ಪು ಎಂಬಂತಾಗಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿದರು.

ಬಿಜೆಪಿಗೆ ಮತ ಚಲಾಯಿಸಿದ್ದವರು ಇಂದು ಕಾಂಗ್ರೆಸ್ ಸರ್ಕಾರದ ಪಾರದರ್ಶಕ ಆಡಳಿತ ಮೆಚ್ಚಿ ನಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆ. ಬಿಜೆಪಿ ಬೆಂಬಲಿತರ ಕೈಯಲ್ಲಿದ್ದ ಪೊನ್ನಂಪೇಟೆ ಮತ್ತು ಗೋಣಿಕೊಪ್ಪಲು ಗ್ರಾ.ಪಂ ಅಧಿಕಾರ ಕಾಂಗ್ರೆಸ್ ಪರವಾಗಲು ಬಿಜೆಪಿ ದುರಾಡಳಿತವೇ ಕಾರಣ. ಸಕ್ರಿಯ ಕಾರ್ಯಕರ್ತರನ್ನೇ ಉಳಿಸಿಕೊಳ್ಳಲಾಗದೆ ಭ್ರಮನಿರಸನಗೊಂಡಿರುವ ಬಿಜೆಪಿ ಅವ್ಯವಹಾರವನ್ನು ಮುಚ್ಚಿ ಹಾಕಲು ಹೋರಾಟದ ನೆಪ ಮಾಡುತ್ತಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಗ್ರಾ.ಪಂ ಅಧ್ಯಕ್ಷ ಕುಲ್ಲಚಂಡ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಿಂಗರಾಜ್, ಗೋಣಿಕೊಪ್ಪಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಅಜಿತ್ ಅಯ್ಯಪ್ಪ, ಅಜ್ಜಿಕುಟ್ಟೀರ ಪೊನ್ನು, ಸಮ್ಮದ್, ಖಾಲಿದ್, ಅಂಕಿತ್, ಎ.ಜೆ.ಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net