

ವಿಜಯವಾಯಿ ಸುದ್ದಿಜಾಲ ಉಳ್ಳಾಲ
ಅನ್ಯಧರ್ಮೀಯರ ಶಿಕ್ಷಣ ಸಂಸ್ಥೆಗಳಿಗೆ ಹಿಂದುಗಳ ಮಕ್ಕಳನ್ನು ಸೇರಿಸದೆ ಹಿಂದುಗಳ ಸಂಸ್ಥೆಗಳಲ್ಲೇ ಸೇರಿಸುವಂತೆ ಹಾಗೂ ಹಿಂದುಗಳ ಸಭಾಂಗಣದಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತೆ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ವಿರುದ್ಧ ದಾಖಲಿಸಲಾಗಿರುವ ಸುಮೊಟೋ ಕೇಸ್ ಹಿಂಪಡೆಯುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡ ವತಿಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡಿ, ಹಿಂದು ದೈವ, ದೇವರುಗಳನ್ನು ತುಚ್ಛವಾಗಿ ನಿಂದಿಸಿದವರಿಗೆ ರಾಜ್ಯ ಸರ್ಕಾರ ಪುರಸ್ಕಾರ ನೀಡಲಾಗುತ್ತಿದ್ದರೆ, ಹಿಂದು ಧರ್ಮ ಜಾಗೃತಿಯ ಭಾಷಣ ಮಾಡಿದವರ ಮೇಲೆ ಕೇಸುಗಳನ್ನು ಹಾಕಿ ದಮನಿಸುವ ಕಾರ್ಯ ನಡೆಸುತ್ತಿದೆ ಎಂದು ಟೀಕಿಸಿದರು.
ಮಕ್ಕಳಿಗೆ ಧರ್ಮ ಶಿಕ್ಷಣ ನೀಡುತ್ತಿದ್ದ ಅರುಣ್ ವಿರುದ್ಧ ಅವರು ಕೆಲಸ ಮಾಡುತ್ತಿದ್ದ ಮಂಗಳೂರಿನ ಕ್ರೈಸ್ತ ಕಾಲೇಜು ಆಡಳಿತ ಮೂರು ತಿಂಗಳ ಹಿಂದೆಯೇ ಕೆಂಗಣ್ಣು ಬೀರಿತ್ತು. ಜತೆಗೆ ಹನ್ನೆರಡು ಹಿಂದು ಶಿಕ್ಷಕರನ್ನು ಕೆಲಸದಿಂದ ತೆಗೆಯಲಾಗಿದೆ. ನವ ದಂಪತಿಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಅರುಣ್ ಅವರು ಹಿಂದು ಸಮಾಜಕ್ಕೆ ಕಿವಿಮಾತು ಹೇಳಿದ್ದಾರೆಯೇ ಹೊರತು ಯಾವುದೇ ಧರ್ಮವನ್ನು ಅಣಕಿಸಿ ನಿಂದಿಸಿಲ್ಲ ಎಂದರು.
ದೈವ, ದೇವರನ್ನು ಹೀಯಾಳಿಸಿದ ಜೆರೋಸಾ ಶಾಲಾ ಶಿಕ್ಷಕಿ ವಿರುದ್ಧ ಯಾವ ಕಠಿಣ ಕಾನೂನು ಕ್ರಮ ಜರುಗಿಸದ ಸಿದ್ದರಾಮಯ್ಯ ಸರ್ಕಾರ ಹುಬ್ಬಳ್ಳಿ ಕೇಸನ್ನು ಹಿಂಪಡೆದಿದೆ. ಇನ್ನೂ ಹಿಂದುಗಳು ಸುಮ್ಮನಿದ್ದರೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಕೇಸನ್ನೂ ಹಿಂಪಡೆಯುತ್ತಾರೆ ಎಂದು ತಿಳಿಸಿದರು.
ವಿಶ್ವ ಹಿಂದು ಪರಿಷತ್ ಮಠ, ಮಂದಿರ, ಅರ್ಚಕ ವಿಭಾಗ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ, ವಿ.ಹಿಂ.ಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ್, ಉಪಾಧ್ಯಕ್ಷ ಮನೋಹರ್ ಸುವರ್ಣ, ಬಜರಂಗದಳದ ಉಳ್ಳಾಲ ನಗರ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು, ಪ್ರಮುಖರಾದ ಕೃಷ್ಣಮೂರ್ತಿ, ಗೋಪಾಲ ಕುತ್ತಾರ್, ನಾರಾಯಣ ಕುಂಪಲ, ರವಿ ಅಸೈಗೋಳಿ, ಗುರುಪ್ರಸಾದ್ ಕಡಂಬಾರ್, ಆಶಿಕ್ ಗೋಪಾಲಕೃಷ್ಣ, ಶಿವಪ್ರಸಾದ್ ಕೊಣಾಜೆ, ಕಿಶನ್ ತಾರಿಪಡ್ಪು, ಹರಿಪ್ರಸಾದ್ ಕೈರಂಗಳ, ನಾಗೇಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷ ಜಗದೀಶ ಆಳ್ವ ಕೂವೆತ್ತಬೈಲು, ಕ್ಷೇತ್ರ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್, ಲಲಿತಾ ಸುಂದರ್, ಜಗದೀಶ ಶೇಣವ ಮತ್ತಿತರರಿದ್ದರು.