

ಆಲೂರು: ಹಳ್ಳಿಗಳಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ರೈತರ ಬದುಕು ದುಸ್ತರವಾಗಿದ್ದು, ನೀರಿಲ್ಲದೇ ಬೆಳೆಗಳು ಒಣಗುತ್ತಿವೆ ಎಂದು ಆರೋಪಿಸಿ ರೈತರು ಆಲೂರು ವಿದ್ಯುತ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಾಸನ ಜಿಲ್ಲಾಧ್ಯಕ್ಷ ಎಚ್.ಬಿ.ಧರ್ಮರಾಜ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ಸರಿಯಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಎಚ್.ಬಿ.ಧರ್ಮರಾಜ್, ವಿದ್ಯುತ್ ವ್ಯತ್ಯಯದಿಂದ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಸಾಲ ಮಾಡಿ ಜಮೀನಲ್ಲಿ ಬೆಳೆ ಬೆಳೆದಿದ್ದು, ಇದೀಗ ವಿದ್ಯುತ್ ಇಲ್ಲದೆ ಸರಿಯಾಗಿ ನೀರು ಹರಿಸಲಾಗುತ್ತಿಲ್ಲ. ಇದರಿಂದ ಬೆಳೆಗಳು ಒಣಗುತ್ತಿದ್ದು, ನಷ್ಟದಿಂದ ರೈತರು ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಆಲೂರು ತಾಲೂಕಿನಲ್ಲಿ ಪ್ರತ್ಯೇಕ ವಿದ್ಯುತ್ ಪ್ರಸರಣ ಕೇಂದ್ರ ಇಲ್ಲದಿರುವುದರಿಂದ ಸರಿಯಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಸರಿಯಾಗಿ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಆಲೂರು ತಾಲೂಕಿನ ಉಪಾಧ್ಯಕ್ಷ ಕುಮಾರ್, ಪುಟ್ಟರಾಜು, ಗಿರೀಶ್, ಹಿರಿಯ ರೈತ ಮುಖಂಡ ಮಂಜುನಾಥ್, ಪುಟ್ಟರಾಜು, ಹರೀಶ್, ವೀರೇಶ್ ತರರು ಇದ್ದರು.