

ಹುಣಸೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಹಾಗೂ ಪ್ರಕರಣವನ್ನು ರಾಜ್ಯ ಸರ್ಕಾರ ನಿಭಾಯಿಸುತ್ತಿರುವ ರೀತಿ ಖಂಡಿಸಿ ಬಿಜೆಪಿ ಹುಣಸೂರು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸಂವಿಧಾನ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಪಪ್ರಚಾರ ಮಾಡುತ್ತಿರುವವರ ಬಂಧನ ಯಾವಾಗ? ಧರ್ಮಸ್ಥಳದ ಪಾವಿತ್ರ್ಯ ಹಾಳು ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಧರ್ಮಕ್ಕೆ ಜಯವಾಗಲಿ, ದುಷ್ಟರ ಸಂಹಾರವಾಗಲಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ(ಗ್ರಾಮಾಂತರ) ಹಾಗೂ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಲು ನಿರಂತರವಾಗಿ ಶ್ರಮಿಸುತ್ತಿರುವ ಎಡಪಂಥೀಯರ ಜತೆಗೂಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಗಳ ಶ್ರದ್ಧಾ ಕೇಂದ್ರಗಳ ವಿರುದ್ಧ ಗದಾಪ್ರಹಾರ ನಡೆಸುತ್ತಿದೆ. ದಿಢೀರ್ ಎಸ್‌ಐಟಿ ರಚಿಸಿ ಮಂಜುನಾಥಸ್ವಾಮಿ ದೇಗುಲದ ವಿರುದ್ಧ ಅಪಚಾರ ನಡೆಸುವ ಹುನ್ನಾರಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ. ಅಪಪ್ರಚಾರ ನಡೆಸುತ್ತಿರುವವರನ್ನು ಬಂಧಿಸಿ ಕಾನೂನಿನ ಕೈಗೆ ಒಪ್ಪಿಸುವ ಕಾರ್ ರಾಜ್ಯ ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಗಳ ಭಾವನೆಗೆ, ಹಿಂದು ಸಮುದಾಯಕ್ಕೆ ಅನ್ಯಾಯವನ್ನೇ ಮಾಡುತ್ತಿದೆ. ಇದೀಗ ಚಾಮುಂಡಿಬೆಟ್ಟ ಕೂಡ ಹಿಂದುಗಳ ಆಸ್ತಿಯಲ್ಲ ಎಂಬ ಡಿಸಿಎಂ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕಿರುವ ಹಿಂದುಗಳ ವಿರುದ್ಧದ ಭಾವನೆಗೆ ಸಾಕ್ಷಿಯಾಗಿದೆ. ಅನ್ನ, ಅಕ್ಷರ ಮತ್ತು ಸೇವಾ ಕಾರ್ಯದಲ್ಲಿ ವಿಶ್ವದಲ್ಲೆಡೆ ಜಾತಿ, ಮತ, ಪಂಥಗಳನು ್ನಮೀರಿ ಬೆಳೆದಿರುವ ಧರ್ಮಸ್ಥಳದ ಕುರಿತು ರಾಜ್ಯ ಸರ್ಕಾರದ ನಿಲುವು ಖಂಡನೀಯ ಎಂದು ಟೀಕಿಸಿದರು.
ಮುಖಂಡರಾದ ದೇವರಹಳ್ಳಿ ಸೋಮಶೇಖರ್, ನಾಗರಾಜ ಮಲ್ಲಾಡಿ, ಚಂದ್ರಶೇಖರ್ ಮಾತನಾಡಿದರು. ಪ್ರತಿಭಟನಾ ಮೆರವಣಿಗೆ ಸಂವಿಧಾನ ವೃತ್ತದಿಂದ ಎಸ್‌ಜೆ ರಸ್ತೆ, ಜೆಎಲ್‌ಬಿ ರಸ್ತೆ, ಬಜಾರ್ ರಸ್ತೆಯನ್ನು ಹಾದು ಗೋಕುಲ ರಸ್ತೆಯ ಮೂಲಕ ತಾಲುಕು ಕಚೇರಿಗೆ ತಲುಪಿದರು. ತಹಸೀಲ್ದಾರ್ ಜೆ.ಮಂಜುನಾಥ್ ಪ್ರತಿಭಟನಾಕಾರರಿಂದ ಮನವಿಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ವಿವೇಕಾನಂದ, ಕಾರ್ಯದರ್ಶಿ ಸತೀಶ್, ಬಿಳಿಕೆರೆ ಘಟಕದ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ನಗರಮಂಡಲ ಅಧ್ಯಕ್ಷ ನಾರಾಯಣ, ರವಿಕುಮಾರ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವೆಂಕಟಮ್ಮ, ನಗರಮಂಡಲ ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷ ಯಶೋದಮ್ಮ, ತಾಲೂಕು ಉಪಾಧ್ಯಕ್ಷೆ ಅಸ್ವಾಳು ಮಂಜುಳಮ್ಮ ಇತರರು ಇದ್ದರು.