ಮನೆ ಹಂಚಿಕೆಯಲ್ಲಿ ಅವ್ಯವಹಾರ ಖಂಡಿಸಿ ಪ್ರತಿಭಟನೆ

11_Ars_Protest
Published on

ಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಮನೆ ಹಂಚಿಕೆ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ರೈತರ ಬಣದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಸಂಘಟನೆ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೆಗೌಡ ಮಾತನಾಡಿ, ಬಡವರಿಗೆ ಮೀಸಲಿದ್ದ ಮನೆಗಳನ್ನು ಹಣಕ್ಕೆ ಮಾರಿಕೊಳ್ಳಲಾಗಿದೆ. ಸೂರು ಕಟ್ಟಿಕೊಳ್ಳಲು ಬಯಸಿದ್ದ ನೂರಾರು ಫಲಾನುಭವಿಗಳ ಕನಸಿಗೆ ಕೊಳ್ಳಿ ಇಡಲಾಗಿದೆ. ಹೀಗಿದ್ದರೂ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ತೆರೆ ಮರೆಯ ಪ್ರಯತ್ನ ನಿರಂತರವಾಗಿ ನಡೆದಿದೆ. ವಂಚನೆ ಕೆಲಸಕ್ಕೆ ತಾಲೂಕು ಪಂಚಾಯಿತಿ ಇಒ ಲಾಗಿನ್ ಪಾಸ್ವರ್ಡ್ ಬಳಕೆ ಮಾಡಲಾಗಿದೆ. ಇದು ಸಾಮಾನ್ಯರಿಂದ ಸಾಧ್ಯವಿಲ್ಲ. ಕೃತ್ಯದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗಿಯಾಗಿರುವುದು ಕಂಡುಬಂದಿದೆ. ಗುತ್ತಿಗೆ ನೌಕರ ಪಾಲಾಕ್ಷ ಅವರನ್ನು ವಜಾ ಮಾಡುವ ಜತೆಗೆ ಪಿಡಿಒ ಕುಮಾರಸ್ವಾಮಿ ಅಮಾನತು ಮಾಡಿ ತಿಪ್ಪೆ ಸಾರಿಸುವ ಕೆಲಸ ನಡೆದಿದೆ. ಕ್ಷೇತ್ರದ ಜನರಿಗೆ ವಾಸ್ತವ ಮನವರಿಕೆ ಮಾಡಿಕೊಡಲು ಉನ್ನತ ಮಟ್ಟದ ತನಿಖೆ ನಡೆಸಬೇಕು. ಜತೆಗೆ ವಂಚನೆಯಲ್ಲಿ ಸಿಕ್ಕಿ ಬಿದ್ದ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ದಯಾನಂದ್ ಮಾತನಾಡಿ, ವರ್ಗಾವಣೆಗೆ ಲಕ್ಷ ಲಕ್ಷ ಕೊಟ್ಟು ಬಂದು ಕೋಟಿ ಕೋಟಿ ಸಂಪಾದನೆ ಮಾಡಲು ಹೊರಟಿರುವ ಭ್ರಷ್ಟ ಅಧಿಕಾರಿಗಳನ್ನು ವಜಾ ಗೊಳಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ವಿಷ್ಣು, ಮೂರ್ತಿ, ತಾರಾವತಿ, ಜ್ಯೋತಿ, ಜಯಶೀಲ, ಮಲ್ಲಿಕಾರ್ಜುನ, ಮಹೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net