ಧರಣಿ ಹಿಂಪಡೆದ ಮಸಣ ಕಾರ್ಮಿಕರ ಸಂಘ, ಆ.3ರಂದು ಸಭೆ

HB halli Masana Union Workers
ಹಗರಿಬೊಮ್ಮನಹಳ್ಳಿಯ ತಾಪಂ ಇಒ ಪರಮೇಶ್ವರಪ್ಪ ಅವರಿಗೆ ಮಸಣ ಕಾರ್ಮಿಕರ ಸಂಘ ಮನವಿ ಸಲ್ಲಿಸಿತು.
Published on

ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಪಂ ಕಚೇರಿ ಬಳಿ ಮಸಣ ಕಾರ್ಮಿಕರ ಸಂಘ ಒಂಬತ್ತು ದಿನಗಳಿಂದ ಕೈಗೊಂಡಿದ್ದ ಧರಣಿಯನ್ನು ಸೋಮವಾರ ಹಿಂಪಡೆಯಿತು.

ಸಂಘದ ಸಂಚಾಲಕಿ ಬಿ.ಮಾಳಮ್ಮ ಮಾತನಾಡಿ, ತಾಪಂ ಇಒ ಪರಮೇಶ್ವರಪ್ಪ ಅವರು ಆ.3ರಂದು ಸಭೆ ಕರೆದಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಧರಣಿ ಕೈಬಿಡಲಾಗಿದೆ ಎಂದು ತಿಳಿಸಿದರು.

ಸಿಐಟಿಯು ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ ಮಾತನಾಡಿ, ಪ್ರತಿ ಸಾರ್ವಜನಿಕ ಮಸಣಕ್ಕೆ ಒಬ್ಬರಂತೆ ಸ್ಥಳೀಯ ಸಂಸ್ಥೆಗಳು ಮಸಣ ನಿರ್ವಾಹಕ ನೌಕರರನ್ನಾಗಿ ನೇಮಿಸಿಕೊಳ್ಳಬೇಕು. ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಖಾತ್ರಿಯಡಿ ಪರಿಗಣಿಸಬೇಕು.

45 ವರ್ಷದ ಎಲ್ಲ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ 3 ಸಾವಿರ ರೂ. ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಖಾತ್ರಿ ಯೋಜನೆಯಡಿ ಕನಿಷ್ಠ 200 ದಿನ ಕೆಲಸ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ದೇವದಾಸಿ ವಿಮೋಚನಾ ಮಹಿಳಾ ಸಂಘದ ತಾಲೂಕು ಕಾರ್ಯದರ್ಶಿ ಪಿ.ಚಾಂದ್‌ಬೀ, ಮಸಣ ಕಾರ್ಮಿಕ ಸಂಘಟನೆಯ ತಾಲೂಕು ಸಂಚಾಲಕ ಹುಲುಗಪ್ಪ, ಮಸಣ ಕಾರ್ಮಿಕರಾದ ಹುಡುಚಪ್ಪ, ಹನುಮಂತಪ್ಪ, ಮಹೇಂದ್ರ, ಮರಿಯಪ್ಪ, ಚೌಡಪ್ಪ, ಶಿವರಾಜ, ನವೀನ್, ಅಂಬರೀಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net