ಹುಲ್ಲೂರ ಗ್ರಾಪಂ ಆವರಣದಲ್ಲಿ ಮೂವರು ಸದಸ್ಯರಿಂದ ಪ್ರತಿಭಟನೆ

Protest by three members in Hullura Gramam premises
ಮುದ್ದೇಬಿಹಾಳ ತಾಲೂಕು ಹುಲ್ಲೂರು ಗ್ರಾಪಂ ಪಿಡಿಒ ಕೊಠಡಿ ಎದುರು ಸದಸ್ಯರಾದ ಶಿವಾನಂದ ಲಮಾಣಿ, ದಿಲೀಪಕುಮಾರ ನಾಯಕ, ಅಶೋಕಗೌಡ ಬಿರಾದಾರ ಪ್ರತಿಭಟನೆ ನಡೆಸುತ್ತಿರುವುದು.
Published on

ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ ಗ್ರಾಪಂಗೆ ಮಂಜೂರಾಗಿರುವ ಬಸವ ವಸತಿ ಯೋಜನೆಯ ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಮಾಡಿಲ್ಲ. ತಮಗೆ ಬೇಕಾದವರನ್ನು ಸೇರಿಸಿಕೊಂಡು ಕಾಟಾಚಾರಕ್ಕೆ ಸಭೆ ನಡೆಸಿದಂತೆ ಮಾಡಿದ್ದಾರೆ.

ಕೂಡಲೇ ಆಯ್ಕೆ ಪ್ರಕ್ರಿಯೆ ರದ್ದುಪಡಿಸಿ ಹೊಸದಾಗಿ ಗ್ರಾಮಸಭೆ ನಡೆಸಿ ಅರ್ಹರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ಇವರಿಗೆ ಇನ್ನಿಬ್ಬರು ಸದಸ್ಯರಾದ ದಿಲೀಪಕುಮಾರ ನಾಯಕ, ಅಶೋಕಗೌಡ ಬಿರಾದಾರ ಬೆಂಬಲ ನೀಡಿದರು.

ಶಿವಾನಂದ ಲಮಾಣಿ ಮಾತನಾಡಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಪುತ್ರರು, ಹಿಂದಿನ ಪ್ರಭಾರ ಪಿಡಿಒ ಮತ್ತು ತಮ್ಮ ಮಾತು ಕೇಳುವ 3-4 ಸದಸ್ಯರನ್ನು ಸೇರಿಸಿಕೊಂಡು ಸಾಮಾನ್ಯ ಸಭೆ ನಡೆಸದೆ ಮನಸ್ಸಿಗೆ ತೋಚಿದಂತೆ ಕೆಲಸ ಮಾಡಿದ್ದಾರೆ.

ವಸತಿ ಯೋಜನೆಗೆ ಅನರ್ಹರ ಆಯ್ಕೆಯಾಗಿದ್ದು, ಅದನ್ನು ತಡೆಯಬೇಕು ಎಂದು ಕೋರಿ 15 ದಿನಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಪರಿಗಣಿಸಿಲ್ಲ. ಇವರಿಗೆ ತಾಪಂ ಯೋಜನಾಧಿಕಾರಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಪಾದಿಸಿದರು.

ಗ್ರಾಪಂಗೆ ವಸತಿ ಯೋಜನೆಯಡಿ ಹೆಚ್ಚುವರಿಯಾಗಿ ಒಟ್ಟು 140 ಮನೆಗಳು ಮಂಜೂರಾಗಿವೆ. ಇವುಗಳಲ್ಲಿ 72 ಮನೆಗಳಿಗೆ ಫಲಾನುಭವಿ ಆಯ್ಕೆ ಮಾಡಿದ್ದಾರೆ. ಇವರಲ್ಲಿ ಅನೇಕರಿಗೆ ಮನೆಗಳಿವೆ. ಸರ್ಕಾರದ ನಿಯಮದನ್ವಯ ಮನೆ ಇಲ್ಲದವರಿಗೆ ಮಾತ್ರ ಆಯ್ಕೆ ಮಾಡಬೇಕು.

ಶಾಸಕ ನಾಡಗೌಡರು ಕೂಡಾ ಅಧಿಕಾರಿಗಳು, ಪಿಡಿಒಗಳ ಸಭೆಯಲ್ಲಿ ಇದನ್ನೇ ಹೇಳಿದ್ದಾರೆ. ಆದರೂ ಇಲ್ಲಿನ ಪಂಚಾಯಿತಿಯವರು ತಾವೇ ಸರ್ವಾಧಿಕಾರಿ ಎಂಬಂತೆ ಅನರ್ಹರನ್ನು ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ನಿಯಮಬಾಹಿರವಾಗಿ ಆಯ್ಕೆ ಪ್ರಕ್ರಿಯೆ ನಡೆಸಿದ ನಂತರ ತರಾತುರಿಯಲ್ಲಿ ಅಂಥ ಫಲಾನುಭವಿಗಳ ಜಿಪಿಎಸ್ ಮಾಡಿದ್ದಾರೆ. ಮೊದಲ ಮನೆ ಪಡೆದವರ ಹೆಸರುಗಳು ಮತ್ತೆ ಫಲಾನುಭವಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೂ ಅವುಗಳನ್ನು ತೆಗೆದು ಹಾಕಿಲ್ಲ.

ಅಧಿಕಾರಿ ಪರಿಶೀಲನೆ ನಡೆಸದೆ ತಮ್ಮ ಹಟವನ್ನೇ ಸಾಧಿಸಲು ಹೊರಟಿರುವುದು ಯಾವ ಸ್ವಾರ್ಥಕ್ಕಾಗಿ, ಇದಕ್ಕೆ ಯಾರ ಒತ್ತಡ ಇದೆ ಎಂದು ಅವರು ಹರಿಹಾಯ್ದರು.

ಪಿಡಿಒ ಅರವಿಂದ ಲೋಣಾವರಮಠ ಅವರು ಹಿಂದೆ ಕೆಲಸ ಮಾಡಿದ್ದ ಪ್ರಭಾರ ಪಿಡಿಒ ರಾಜೇಂದ್ರ ಎಕ್ಸಂಬಿ ಅವರನ್ನು ಪಂಚಾಯಿತಿಗೆ ಕರೆಸಿ ನಿಮ್ಮ ಅವಧಿಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಇದಕ್ಕೆ ಉತ್ತರ ನೀಡಬೇಕು ಎಂದು ಸೂಚಿಸಿದರು. ಪ್ರತಿಕ್ರಿಯಿಸಿದ ಎಕ್ಸಂಬಿ ಅವರು ನನಗೆ ಎರಡು ಪಂಚಾಯಿತಿ ಜವಾಬ್ದಾರಿ ಇದ್ದು ಸದಸ್ಯರು ನೀಡಿದ ಅರ್ಜಿ ಮೇಲಧಿಕಾರಿಗಳಿಗೆ ಕಳಿಸಲು ವಿಳಂಬವಾಗಿದೆ. ಕೂಡಲೇ ಅರ್ಜಿಯನ್ನು ಮೇಲಧಿಕಾರಿಗಳಿಗೆ ಕಳಿಸುವುದಾಗಿ ತಿಳಿಸಿದರು.

ಸ್ಥಳೀಯ ವ್ಯಕ್ತಿಯೊಬ್ಬ ಧರಣಿ ನಿರತ ಶಿವಾನಂದ ಅವರನ್ನು ಬೆದರಿಸಲು ಮುಂದಾಗಿದ್ದ. ಧರಣಿ ವಿಷಯ ತಿಳಿದು ಪಂಚಾಯಿತಿಗೆ ಬಂದಿದ್ದ ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ಸ್ಥಳದಿಂದ ದೂರ ಕಳಿಸಿದ ಮೇಲೆ ಪರಿಸ್ಥಿತಿ ತಿಳಿಗೊಂಡಿತು. ನನ್ನ ಹೋರಾಟ ಹತ್ತಿಕ್ಕಲು ಸ್ಥಳೀಯರನ್ನು ಛೂ ಬಿಡಲಾಗಿದೆ. ನನಗೆ ಜೀವ ಭಯ ಇದೆ ಎಂದು ಹೋರಾಟಗಾರರು ಪೊಲೀಸರಿಗೆ ತಿಳಿಸಿ ಭದ್ರತೆಗೆ ಕೋರಿದರು. ಶುಕ್ರವಾರವೂ ತಮ್ಮ ಪ್ರತಿಭಟನೆ ಮುಂದುವರಿಸುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net