

ಅರಸೀಕೆರೆ: ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಇಂದಿರಾನಗರ ಬಡಾವಣೆಯ ಮುಸ್ಲಿಂ ಮಹಿಳಾ ನಿವಾಸಿಗಳು ನಗರಸಭೆ ಕಚೇರಿ ಪಡಸಾಲೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಆಶಾಬಿ ಮಾತನಾಡಿ, ಮನೆ ಕಟ್ಟಿ ಕೊಡುವುದಾಗಿ ನಂಬಿಸಿ ನಮ್ಮ ಬದುಕನ್ನು ಬೀದಿಗೆ ತಳ್ಳಿದ್ದಾರೆ. ಗಂಡ, ಮಗನನ್ನು ಕಳೆದುಕೊಂಡು ಆಶ್ರಯ ಇಲ್ಲದಂತಾಗಿದೆ. ಸಮಸ್ಯೆ ಗಂಭೀರತೆ ಕುರಿತು ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿರುವುದು ನೋವು ತಂದಿದೆ. ನಮಗೆ ನ್ಯಾಯ ದೊರೆಯುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದರು.
ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಸ್ಲಂ ಬೋರ್ಡ್ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ನೀಡಿದ ಭರವಸೆಗೂ ಬಗ್ಗದೆ ನಿವಾಸಿಗಳು ಆಕ್ರೋಶ ಹೊರಹಾಕಿದರು.
ಧರಣಿ ವಿಷಯ ತಿಳಿಯುತ್ತಿದ್ದಂತೆ ನಗರಸಭೆ ಚುನಾಯಿತ ಸದಸ್ಯರು, ರಾಜಕೀಯ ಪಕ್ಷಗಳ ಮುಖಂಡರು ದೌಡಾಯಿಸಿ ಸಂಕಷ್ಟ ಆಲಿಸಿ ಧರಣಿಗೆ ಬೆಂಬಲ ನೀಡಿದರು.
ಅಸಮಾಧಾನ: ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್ ಧರಣಿ ನಿರತರೊಂದಿಗೆ ಮಾತನಾಡಿ, ಹಕ್ಕುಪತ್ರ ನೀಡಿದ್ದರೂ ಫಲಾನುಭವಿಗಳಿಗೆ ಮನೆ ಕೊಡದಿರುವುದು ಅಕ್ಷಮ್ಯ, ಈ ಸಂಬಂಧ ಸ್ಲಂ ಬೋರ್ಡ್ ಅಧಿಕಾರಿಗಳ ಜತೆ ಸಮಸ್ಯೆಯ ಗಂಭೀರತೆ ವಿವರಿಸುವುದಾಗಿ ಹೇಳಿದರಲ್ಲದೆ, ನಿರ್ಲಕ್ಷೃಕ್ಕೆ ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಯಲ್ಲಿ ಶಾಹಿನಾ, ಆತುಬಿ, ಜಬೀನಾ, ಶಕೀರಾ, ಶಕೀಲಾಭಾನು ಇನ್ನಿತರರು ಪಾಲ್ಗೊಂಡಿದ್ದರು.