

ಸರಗೂರು: ಕೆಬ್ಬೇಪುರ, ನಡಾಡಿ, ಕಾಂತನಹಾಡಿ ಗ್ರಾಮಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ ಎಂದು ಆರೋಪಿಸಿ ದಸಂಸ (ಅಂಬೇಡ್ಕರ್‌ವಾದ) ಪದಾಧಿಕಾರಿಗಳು ಬುಧವಾರ ರಸ್ತೆಯಲ್ಲಿ ನಾಟಿ ಮಾಡಿ ಪ್ರತಿಭಟನೆ ನಡೆಸಿದರು.
ದಸಂಸ ಅಂಬೇಡ್ಕರ್‌ವಾದದ ಸಂಚಾಲಕ ದೊಡ್ಡಸಿದ್ದು ಮಾತನಾಡಿ, ತಾಲೂಕಿನ ಕಾಡಂಚಿನ ಭಾಗದಲ್ಲಿ ಹೆಚ್ಚು ಹಾಡಿಗಳನ್ನು ಹೊಂದಿರುವ ಬಿ ಮಟಕೆರೆ ಪಂಚಾಯಿತಿ ಅಧಿಕಾರಿಗಳು ಹಾಡಿಯ ಜನರ ಕಷ್ಟ ಕೇಳುತ್ತಿಲ್ಲ. ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ದೂರಿದರು.
ಮೋಳೆಯೂರು ಗ್ರಾಮದವರೆಗೆ ಮಾತ್ರ ಬಸ್ ವ್ಯವಸ್ಥೆ ಇದ್ದು, ಮೂರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕೆಬ್ಬೆಪುರ, ನಡಾಡಿ, ಕಾಂತನಹಾಡಿಗೆ ನಡೆದುಕೊಂಡು ಹೋಗಬೇಕು. ಈ ಭಾಗದಲ್ಲಿ ಕಾಡು ಪ್ರಾಣಿಗಳು ಹೆಚ್ಚು ಓಡಾಡುವುದರಿಂದ ನಿವಾಸಿಗಳ ಪ್ರಾಣಕ್ಕೆ ಲೆಕ್ಕ ಇಲ್ಲದಂತಾಗಿದೆ ಎಂದರು.
ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿ, 25ರಿಂದ 30 ವರ್ಷಗಳಿಂದ ರಸ್ತೆ ಸರಿಪಡಿಸಿ ಎಂದು ಶಾಸಕರಿಗೆ ಮನವಿ ಸಲ್ಲಿಸಿಕೊಂಡು ಬಂದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ. ಶಾಲೆಗೆ ತೆರಳುವ ಮಕ್ಕಳು, ಪಟ್ಟಣಕ್ಕೆ ತೆರಳುವವರು ಸಮಸ್ಯೆಯ ನಡುವೆಯೇ ಓಡಾಡುವ ಪರಿಸ್ಥಿತಿ ಇದೆ ಎಂದರು.
ಪ್ರತಿಭಟನಾನಿರತರು ರಸ್ತೆ ಮಧ್ಯೆ ಶಾಮಿಯಾನ ಹಾಕಿ ಅಡುಗೆ ತಯಾರಿಸಿದರು. ಕಂದಾಯ ಇಲಾಖೆ ಉಪತಹಸೀಲ್ದಾರ್ ರವೀಂದ್ರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ದಸಂಸ ಅಂಬೇಡ್ಕರ್‌ವಾದದ ಸಂಚಾಲಕ ಶಿವರಾಜು ಚಂಗೌಡನಹಳ್ಳಿ, ಕೃಷ್ಣ ಕುರ್ಣೆಗಾಲ, ಪಾರ್ವತಿ, ರಾಣಿ ನಡಹಾಡಿ, ಸುಶೀಲ, ಲಕ್ಷ್ಮೀ, ಮಾರ, ಭೊಮ್ಮ , ಕರಿಯ, ಕುಳ್ಳ, ರಾಜೇಶ, ರಾಮು, ಶೇಕರ, ಕೆಬ್ಬೆಪುರ, ನಡಹಾಡಿ ಕಾಂತನ ಹಾಡಿಯ ನಿವಾಸಿಗಳು ಇದ್ದರು.