

ಬೆಂಗಳೂರು:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆಯನ್ನು "ಬಿ' ಗ್ರೂಪ್ಗೆ ಸೇರ್ಪಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶುಕ್ರವಾರದಿಂದ (ಅ.4) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟ ಪ್ರತಿಭಟನೆ ನಡೆಸಲಿದ್ದಾರೆ.
ಇದಕ್ಕೆ ಕಾರ್ಯದರ್ಶಿ, ಲೆಕ್ಕ ಸಹಾಯಕರು, ಕರ ವಸೂಲಿ ಸಿಬ್ಬಂದಿ ಮತ್ತು ಡಾಟಾ ಎಂಟ್ರಿ ಅಪರೇಟರ್ಗಳು ಸಾಥ್ ನೀಡಿದ್ದಾರೆ. ಇದರಿಂದಾಗಿ ಗ್ರಾಮ ಪಂಚಾಯಿತಿಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ಮಾತನಾಡಿ, ರಾಜ್ಯಾದ್ಯಂತ ಅಂದಾಜು 45 ಸಾವಿರ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಲಿದ್ದಾರೆ.
ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗಿದ್ದರೂ ಪಂಚಾಯಿತಿಗಳಲ್ಲಿ ಹಿಂದಿನಂತೆ ಸಿಬ್ಬಂದಿ ಇದ್ದಾರೆ. ಕೆಲಸದೊತ್ತಡದಿಂದ ಅಧಿಕಾರಿಗಳು, ನೌಕರರು ಬಳಲುತ್ತಿದ್ದಾರೆ. ಮೂರು ವರ್ಷಗಳಿಂದ ಖಾಲಿಯಾಗಿರುವ ಪಿಡಿಒ, ಕಾರ್ಯದರ್ಶಿ ಮತ್ತು ಲೆಕ್ಕ ಪರಿಶೋಧಕರ ಹುದ್ದೆ ಭರ್ತಿ ಮಾಡಿಲ್ಲ. ವೃಂದ ಮತ್ತು ನೇಮಕಾತಿ ನಿಯಮ ರಚಿಸುವಾಗ ಸಲಹೆ ಪರಿಗಣಿಸದೆ ಅವೈಾನಿಕ ನಿಯಮ ಅಳವಡಿಸಲಾಗಿದೆ. ನೆಪಮಾತ್ರಕ್ಕೆ ಕುಂದುಕೊರತೆ ಪ್ರಾಧಿಕಾರವನ್ನು ರಚಿಸಲಾಗಿದೆ. ಅಹವಾಲುಗಳಿಗೆ ಮನ್ನಣೆ ದೊರೆಯುತ್ತಿಲ್ಲ. ಹಲವು ಬಾರಿ ಪಿಡಿಒಗಳು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರೂ ಸ್ಪಂದನೆ ದೊರೆತಿಲ್ಲ. ಕಳೆದ ವಾರವಷ್ಟೇ ಅ.4ರಿಂದ ಕೆಲಸ ಸ್ಥಗಿತಗೊಳಿಸಿ ಅರ್ನಿದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಸರ್ಕಾರದಿಂದ ನಮಗೆ ಭರವಸೆ ಸಿಕ್ಕಿಲ್ಲ. ಈ ಧೋರಣೆ ಖಂಡಿಸಿ ಹೋರಾಟಕ್ಕೆ ಮಾಡಲಾಗುವುದು ಎಂದರು.
ಪ್ರಾಣ ಬಿಟ್ಟ 21 ಪಿಡಿಒಗಳು:
ಎಲ್ಲ ಪಿಡಿಒ ಹುದ್ದೆಗಳನ್ನು ಗೆಜೆಟೆಡ್ "ಬಿ' ಗುಂಪಿಗೆ ಉನ್ನತಿಕರಣ ಮಾಡಬೇಕು. ಒಂದೇ ತಾಲೂಕಿನಲ್ಲಿ 7 ವರ್ಷ ಸೇವೆ ಸಲ್ಲಿಸಿದವರನ್ನು ವರ್ಗಾವಣೆ ಮಾಡುವ ನಿಯಮ ಬಲವಂತವಾಗಿ ಹೇರಲಾಗಿದೆ. ಸರ್ಕಾರದ ಒತ್ತಡ ಕಾರ್ಯತಂತ್ರದ ಪರಿಣಾಮ ಈಗಾಗಲೇ 21 ಪಿಡಿಒಗಳು ಜೀವ ಹೋಗಿದೆ. ಇನ್ನೂ ಹಲವು ಪಿಡಿಒಗಳು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾರೆ. ವರ್ಗಾವಣೆ ನಿಯಮದಲ್ಲಿ ಬದಲಾವಣೆಗೂ ತರುವ ಮುನ್ನ ಸಂದ ಸಲಹೆ ಪಡೆಯಬೇಕು. 7 ವರ್ಷ ಪೂರ್ಣಗೊಂಡಿರುವವರನ್ನು ವರ್ಗಾವಣೆ ಮಾಡುವುದನ್ನು ಕೈಬಿಡಬೇಕು. ಪಂಚಾಯತ್ಗಳಿಗೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಪಿಡಿಒ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ ಆದೇಶ ಹೊರಡಿಸಬೇಕು ಎಂದು ರಾಜು ವಾರದ ಹೇಳಿದ್ದಾರೆ.
ಬೇಡಿಕೆಗಳೇನು?
* ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ ತರುವ ಮುನ್ನ ಸಂದ ಸಲಹೆ ಪಡೆಯಬೇಕು
* ಎಂಜಿಎನ್ಆರ್, ಇಜಿಒ ಯೋಜನೆ ಅನುಷ್ಠಾನ ಗುರಿ ನಿಗದಿ ಕೈಬಿಡಬೇಕು
* ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಗ್ರಾ.ಪಂ. ಅಭಿಪ್ರಾಯ ಪಡೆದು ಕೂಸಿನ ಮನೆ ಮುಂದುವರಿಸಬೇಕು
* ಗ್ರಾ.ಪಂ.ಮೇಲ್ದರ್ಜೆಗೇರಿಸಿದ ವೇಳೆ ನಗರ ಸ್ಥಳಿಯ ಸಂಸ್ಥೆಗಳಿಗೆ ಅಲ್ಲಿನ ಸರ್ಕಾರಿ ನೌಕರರನ್ನು ವಿಲೀನ
*2007ರಿಂದ 2011-12ರ ಸಾಲಿನವರೆಗಿನ ನರೇಗಾ ಕೇಸ್ಗಳ ಶಾಶ್ವತವಾಗಿ ಮುಕ್ತಾಯಗೊಳಿಸಲು ಲೋಕಾಯುಕ್ತಕ್ಕೆ ಮಾಹಿತಿ ನೀಡಬೇಕು
* ಗ್ರಾ.ಪಂ. ಸಿಬ್ಬಂದಿಗೆ ಇಲಾಖೆಯಿಂದ ವೇತನ ನಿಗದಿ, ಇಎಸ್ಐ, ಪಿಎಫ್ ಜಾರಿ
* ಆರೋಗ್ಯ ವಿಮೆ ಹೆಚ್ಚಿಸಬೇಕು
* ಪಂಚ ನೌಕರರಗಳಿಗೆ ನಿವೃತ್ತಿ ಉಪಧನವನ್ನು 60 ತಿಂಗಳ ವೇತನ ಮೊತ್ತವನ್ನು ಉಪಧನವನ್ನು ನೀಡಬೇಕು
* ನೀರುಂಟಿಗಳಿಗೆ ವಾರಕ್ಕೆ ಒಂದು ದಿನ ರಜೆ ನೀಡಬೇಕು
* ಗ್ರೇಡ್-1 ಕಾರ್ಯದರ್ಶಿಗಳ ಸಿಆ್ಯಂಡ್ಆರ್ ಪಟ್ಟಿಯನ್ನು ತುರ್ತಾಗಿ ಪ್ರಕಟಿಸಬೇಕು
* ನೇರ ನೇಮಕಾತಿ ಕೋಟಾದಡಿ ಒಂದು ಬಾರಿ ಏಕಕಾಲದಲ್ಲಿ ಬಡ್ತಿ ನೀಡಬೇಕು
* ಗ್ರೇಡ್-2 ಕಾರ್ಯದರ್ಶಿ ಹುದ್ದೆಯಿಂದ ಗ್ರೇಡ್&1 ಕಾರ್ಯದರ್ಶಿ ಹುದ್ದೆಗೆ ಬಡ್ತಿ ಶೇ.33ರಷ್ಟಿದ್ದು, ಇದನ್ನು ಶೇ.80ಕ್ಕೆ ಹೆಚ್ಚಿಸಬೇಕು
* ಸರ್ವೀಸ್ ಆಧಾರದಲ್ಲಿ ಹಳೆ ಪಿಂಚಣಿ ಜಾರಿಗೆ ತರಬೇಕು
* ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಕೇರಳ ಮಾದರಿಯ ಗೌರವಧನ ಹೆಚ್ಚಿಸಬೇಕು
* ಉಚಿತ ಬಸ್ಪಾಸ್, ಆರೋಗ್ಯವಿಮೆ ಸೌಲಭ್ಯ ಕಲ್ಪಿಸಬೇಕು