ಮಾವುತ, ಕಾವಾಡಿಗರಿಂದ ಪ್ರತಿಭಟನೆ

ಮಾವುತ, ಕಾವಾಡಿಗರಿಂದ ಪ್ರತಿಭಟನೆ
Published on

ಕುಶಾಲನಗರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದುಬಾರೆ ಸಾಕಾನೆ ಶಿಬಿರದಲ್ಲಿನ ಮಾವುತರು ಹಾಗೂ ಕಾವಾಡಿಗ ಸಿಬ್ಬಂದಿ ಗುರುವಾರ ಶಿಬಿರದಲ್ಲಿ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆ ತಮ್ಮ ವೃತ್ತಿ ಕಾಯಂಗೊಳಿಸಬೇಕು. ವಸತಿ, ಪಡಿತರ ಚೀಟಿ ಸೇರಿದಂತೆ ದಸರಾ ಸಂದರ್ಭದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಹತೆಯ ಸಬೂಬು ಹೇಳಿಕೊಂಡು, ಶಿಬಿರದಲ್ಲಿ ಕನಿಷ್ಠ ಅನುಭವ ಇಲ್ಲದ ವ್ಯಕ್ತಿಗಳಿಗೆ ಶಿಬಿರದ ಜಮೇದಾರ ಹುದ್ದೆಗೆ ನಿಯೋಜನೆ ಮಾಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಿಬಿರದಲ್ಲಿ 23 ಆನೆಗಳಿದ್ದು, ಅವುಗಳ ಮೇಲ್ವಿಚಾರಣೆಗೆ 27 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸಿದರೂ ಇನ್ನೂ ಕಾಯಂಗೊಳಿಸಿಲ್ಲ. ಅನುಭವದಿಂದ ಮಾತ್ರ ಆನೆಗಳ ನಿರ್ವಹಣೆ ಸಾಧ್ಯವೇ ಹೊರತು ಶಿಕ್ಷಣದಿಂದ ಅಲ್ಲ ಎಂದು ಹಿರಿಯ ಮಾವುತ ಡೋಬಿ ಅಸಮಾಧಾನ ವ್ಯಕ್ತಪಡಿಸಿದರು.

ಮೂರು ದಿನಗಳೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ದುಬಾರೆ ಸಾಕಾನೆ ಶಿಬಿರದ ಸಿಬ್ಬಂದಿ ಆನೆಗಳ ಸಹಿತ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಶಿಬಿರಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮಾಹಿತಿ ಪಡೆದು ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಚಿಣ್ಣಪ್ಪ, ಕುಳ್ಳ ರಾಮ, ಈರಾ, ಷರೀಫ್, ಗಿರೀಶ್, ದೊರೆಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net