ಹಾಸ್ಟೆಲ್ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

11-kollegal--4,
Published on

ಕೊಳ್ಳೇಗಾಲ: ಮೂಲ ಸೌಕರ್ಯವಿಲ್ಲದ ವಿದ್ಯಾರ್ಥಿ ನಿಲಯದಲ್ಲಿ ಹೈರಾಣಾಗಿದ್ದೇವೆ, ನೈರ್ಮಲ್ಯ ಇಲ್ಲ, ಕುಡಿಯುವ ನೀರಿಲ್ಲ, ಶೌಚಗೃಹವನ್ನು ನಾವೇ ತೊಳಿಬೇಕು, ಇದು ಯಾವ ಹಣೆಬರಹ ಎಂದು ಭಾನುವಾರ ವಿದ್ಯಾರ್ಥಿಗಳು ಪ್ರತಿಭಟಿಸಿದರು.


ಪಟ್ಟಣದ ಶಿವಕುಮಾರಸ್ವಾಮೀಜಿ ಬಡಾವಣೆ ಸಮೀಪವಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಭಾಗ-3 ವಾಸವಿದ್ದ 17 ಬಾಲಕಿಯರು ತಮಗಿರುವ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು.


ಒಂದು ವರ್ಷದಿಂದ ಹಾಸ್ಟೆಲ್‌ನಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಮಕ್ಕಳಿಗೆ ಊಟದ ಕೊರತೆ ಸೇರಿದಂತೆ ಶೌಚಗೃಹಗಳನ್ನು ಮಕ್ಕಳಿಂದ ಸ್ವಚ್ಛತೆಗೊಳಿಸುವುದನ್ನು ಖಂಡಿಸಿ ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದರಲ್ಲದೆ, ಶನಿವಾರ ರಾತ್ರಿಯಿಂದ ಊಟ, ತಿಂಡಿ ಮಾಡದೇ ಪ್ರತಿಭಟಿಸಿದರು.


ಈ ಬಗ್ಗೆ ವಿಚಾರ ತಿಳಿದ ಸ್ಥಳಕ್ಕೆ ತೆರಳಿದ ಮುಖಂಡರಾದ ಹಿಂದ್ವಾಡಿ ಸಿದ್ದರಾಜು, ರಾಜೇಶ್ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್ ಅವರನ್ನು ಕರೆಯಿಸಿ ವಿದ್ಯಾರ್ಥಿನಿಯರ ತೊಂದರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಸ್ಥಳಕ್ಕೆ ಧಾವಿಸಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರಭಾರ ಕೇಶವ ಮೂರ್ತಿ ಅವರಿಗೆ ಮಕ್ಕಳ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳುವಂತೆ ಎಸಿ ಸೂಚನೆ ನೀಡಿದರು.


ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದ ಕೇಶವಮೂರ್ತಿ ತಕ್ಷಣ ಹಾಸ್ಟೆಲ್ ವಾರ್ಡನ್ ಜ್ಯೋತಿ ಬದಲಿಸಿ ಪರ್ಯಾಯ ವ್ಯವಸ್ಥೆ ಮಾಡಿ ಮಕ್ಕಳಿಗೆ ಶುಚಿ ಹಾಗೂ ರುಚಿಯಾದ ಊಟದ ವ್ಯವಸ್ಥೆ ಹಾಗೂ ಅಗತ್ಯ ಮೂಲ ಸೌಕರ್ಯ ನೀಡಲಾಗುವುದು ಎಂದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟು ಊಟ ಮಾಡಿದರು.


ಅದೇ ರಾಗ ಅದೇ ಹಾಡು: ವಿದ್ಯಾರ್ಥಿನಿಯೊಬ್ಬರು ನಮ್ಮ ಸಮಸ್ಯೆ ಯಾರೂ ಸ್ಪಂದಿಸುತ್ತಿಲ್ಲ. ಅದೇ ರಾಗ, ಅದೇ ಹಾಡು ಅಷ್ಟೆ. ಬಾತ್ ರೂಮ್ ತೊಳೆಯುವುದು ಯಾವ ಹಣೆಬರಹ, ನಾವೂ ಊಟವನ್ನು ಮಾಡುವುದಿಲ್ಲ. ವಸತಿ ನಿಲಯ ಒಳಗೂ ಹೋಗುವುದಿಲ್ಲ ಎಂದು ಮನವೊಲಿಸಲು ಬಂದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.


ಟ್ಯಾಂಕ್‌ನಲ್ಲಿ ಮಣ್ಣು: ವಸತಿ ನಿಲಯದಲ್ಲಿ ಪಾರಿವಾಳ ಹಿಕ್ಕೆಗಳು, ಧೂಳು ತುಂಬಿಕೊಂಡಿರುವುದು ಕಂಡುಬಂದಿತು. ನೀರಿನ ಟ್ಯಾಂಕರ್ ಹಲವು ತಿಂಗಳಿನಿಂದ ಸ್ವಚ್ಛಗೊಳಿಸದ ಕಾರಣ ನೀರಿನಲ್ಲಿ ಮಣ್ಣು ಶೇಖರಣೆ ಆಗಿತ್ತು. ಪ್ರತಿಭಟನೆ ವೇಳೆ ಆಗಮಿಸಿದ ಅಧಿಕಾರಿಗಳಿಗೆ ವಿದ್ಯಾರ್ಥಿನಿಯರು ಟ್ಯಾಂಕ್ ಪರಿಸ್ಥಿತಿ ಹಾಗೂ ನಿಲಯ ಪರಿಸ್ಥಿತಿಯನ್ನು ತೋರಿಸಿದರು.


ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರಾದ ಭಾವನ, ರೇಖಾ, ಕೀರ್ತನಾ ಭೂಮಿಕಾ, ಸಿಂಧೂ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net