

ಕನಕಪುರ : ಜಿಲ್ಲಾಧಿಕಾರಿಗಳ ಅಸಂವಿಧಾನ ನಿಷೇಧಾಜ್ಞೆ ತೆರವಿಗೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಜ.6 ರಂದು ರಾಮನಗರದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ ತಿಳಿಸಿದರು. ನಗರದ ರಾಜಾರಾಮ್ ರಸ್ತೆಯಲ್ಲಿನ ರಾಜ್ಯ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಜಿಲ್ಲಾಧಿಕಾರಿಗಳಿಗೆ ರೈತರು, ಸಾರ್ವಜನಿಕರ ಕೆಲಸ ಮಾಡುವುದೆಂದರೆ ಅಲರ್ಜಿ. ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದಾರೆ ಎಂಬ ಮನೋಭಾವದಿಂದ ನಿಷೇಧಾಜ್ಞೆಯನ್ನು ಹೇರಿದ್ದಾರೆ, ರೈತ ಸಂಘವು ಇವರಿಗೆ ಕಾನೂನಿನ ಪಾಠ ಕಲಿಸಿ ಇಲ್ಲಿಂದ ಕಳಿಸಿಕೊಡಲಿದೆ ಎಂದು ಹೇಳಿದರು.
ಕೆ.ಆರ್.ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ ಮಾತನಾಡಿ, ಜಿಲ್ಲಾಧಿಕಾರಿಗಳಿಗೆ ಹೋರಾಟಗಳು ಬೇಡವೆಂದರೆ ಸಾರ್ವಜನಿಕರು, ರೈತರ ಬಾಕಿ ಉಳಿದಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿಲಿ.ಬದಲಾಗಿ ಸರ್ವಾಧಿಕಾರಿ ಧೋರಣೆ ತೋರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದರು.ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿದರು.ರಾಜ್ಯ ರೈತ ಸಂಘದ ಸದಸ್ಯರಾದ ಕೃಷ್ಣಪ್ಪ, ಸಿದ್ದರಾಜು, ರವಿ ಹಾಗೂ ಚಿಕ್ಕಸಾದೇನಹಳ್ಳಿ ಲೋಕೇಶ್ ಹಾಜರಿದ್ದರು.