

ಕೊಳ್ಳೇಗಾಲ: ಪಟ್ಟಣದ ಹೊರವಲಯದಲ್ಲಿರುವ ಬೈಪಾಸ್ ರಸ್ತೆಯ ಬಳಿ ಒತ್ತುವರಿಯಾಗಿರುವ ಕಾಲುವೆಗಳನ್ನು ತೆರವುಗೊಳಿಸಿ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಕಾಲುವೆ ದುರಸ್ತಿ ಆಗದೆ ರೈತರಿಗೆ ಸಮಸ್ಯೆಯಾಗಿದೆ. ನೀರಾವರಿ ಅಧಿಕಾರಿಗಳು ಕೂಡಲೇ ಒತ್ತುವರಿ ತೆರವುಗೊಳಿಸಿ ಕಾಲುವೆ ದುರಸ್ತಿಪಡಿಸಿ ಎಂದರು.
ಯುವ ರೈತ ಮುಖಂಡ ಕೀರ್ತಿ ಮಾತನಾಡಿ, ಕೊಳ್ಳೇಗಾಲ ಕಸಬಾ ಹೋಬಳಿ ಕಬಿನಿ ವ್ಯಾಪ್ತಿಗೆ ಬರುವ ಹರಳೆ ಭಾಗದಲ್ಲಿ ಕಾಲುವೆಗಳು ಒತ್ತುವರಿಯಾಗಿ ಮುಚ್ಚಿಹೋಗಿದೆ. ಇದರಿಂದ ದೂರದ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮ ಬೆಳೆಗಳು ಒಣಗಿರುವುದು ಹಾಗೂ ಸೊರಗುವ ನಿದರ್ಶನಗಳಿವೆ. ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮವಹಿಸಿ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಸಮಸ್ಯೆಯ ಬಗ್ಗೆ ಕಬಿನಿ ಇಇ ಅವರ ಗಮನ ಸೆಳೆದಿದ್ದೇವೆ. ಆದರೂ ಏನು ಪ್ರಯೋಜನವಾಗಿಲ್ಲ. ಇದೀಗ ಜಮೀನುಗಳಲ್ಲಿ ಕಟಾವು ನಡೆದಿದೆ. ರೈತರು ಯಾವುದೇ ಫಸಲನ್ನು ಹಾಕಿಲ್ಲ. ಈ ಸಮಯದಲ್ಲಿ ಒತ್ತುವರಿ ತೆರವು ಮಾಡಿ ನೀರಾವರಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಕಬಿನಿ ಎಇಇ ರಾಮಕೃಷ್ಣ ಮಾತನಾಡಿ, ಒತ್ತುವರಿಯಿಂದ ಕಾಲುವೆಗಳು ಮುಚ್ಚಿ ಹೋಗಿದೆ. ರೈತರ ಮನವಿಯಂತೆ ಸ್ಥಳ ಪರಿಶೀಲಿಸಿದ್ದೇನೆ. ಈ ಬಗ್ಗೆ ಕಬಿಬಿ ಇಇ ಅವರ ಗಮನ ಸೆಳೆದು ಒಂದು ವಾರದೊಳಗೆ ಪ್ರಮುಖ ಸ್ಥಳಗಳ ಕಾಲುವೆ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ಸರ್ವೀಸ್ ರಸ್ತೆ ಮಾಡಿ: ಬೈಪಾಸ್ ರಸ್ತೆ ಜತೆಗೆ ಸರ್ವೀಸ್ ರಸ್ತೆ ಆಗದೆ ಸಂಚಾರಕ್ಕೆ ಸಮಸ್ಯೆ ಆಗಿದೆ. ಅಪಘಾತ ಸಂಭವಿಸುತ್ತಿದೆ. ಹರಳೆ, ದಾಸನಪುರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ರಸ್ತೆ ಮಾಡಬೇಕೆಂದು ರೈತರು ಒತ್ತಾಯಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಚಾರ್ಲಿ, ಪ್ರಧಾನ ಕಾರ್ಯದರ್ಶಿ ಪರಿಯನಾಯಿಗಂ, ವಸಂತಕುಮಾರ್, ನಾರಾಯಣ ಮೂರ್ತಿ, ಮುಕುಂದ ರಾಜು, ಕುಮಾರ್, ಸಿದ್ದರಾಜು, ಗೀರೀಶ್ ಇದ್ದರು.