ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

IMG-20231230-WA0122
Published on

ಶ್ರೀರಂಗಪಟ್ಟಣ: ಕನ್ನಂಬಾಡಿ ಅಣೆಕಟ್ಟೆಯಿಂದ ಕಾವೇರಿ ಕಣಿವೆಯ ನಾಲೆಗಳಿಗೆ ತಕ್ಷಣ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಬೇಕು ಎಂದು ರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದರು.


ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರೊಂದಿಗೆ ಜಮಾವಣೆಗೊಂಡ ಸಂಘದ ಕಾರ್ಯಕರ್ತರು, ರಾಜ್ಯಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.


ಬಳಿಕ ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಮಾತನಾಡಿ, ರಾಜ್ಯದಲ್ಲಿ ಹಿಂದೆಂದೂ ಕಾಣದ ರೀತಿಯ ದುರಾಡಳಿತವನ್ನು ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕಾಣುವ ದುಸ್ಥಿತಿ ರೈತಾಪಿ ಜನರಿಗೆ ಎದುರಾಗಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಕಾವೇರಿ ಕೊಳ್ಳದ ರೈತರಿಗೆ ಬೆಳೆ ಬೆಳೆಯಲು ಅವಕಾಶ ನೀಡದಂತೆ, ಬಿತ್ತಿರುವ ಬೆಳೆಗೆ ನೀರುಣಿಸದಂತೆ ಅತ್ಯಂತ ತಾತ್ಸಾರ ಭಾವನೆಯಲ್ಲಿ ದುರಹಂಕಾರ ಪ್ರದರ್ಶಿಸುವಲ್ಲಿ ರಾಜ್ಯ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ನಡೆದುಕೊಂಡಿದ್ದಾರೆ. ತಕ್ಷಣ ಕಾವೇರಿ ಕಣಿವೆ ನಾಲೆಗಳಿಗೆ ಒಂದು ಕಟ್ಟು ನೀರುಣಿಸಿ ಕಬ್ಬು, ಭತ್ತ ಸೇರಿದಂತೆ ತೋಟದ ಬೆಳೆಗಳನ್ನು ಉಳಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.


ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ಗೆ ಛೀಮಾರಿ, ಸಚಿವ ಸ್ಥಾನದಿಂದ ಕೈ ಬಿಡುವಂತೆ ಆಗ್ರಹ:
ರೈತ ಮುಖಂಡರಾದ ಮೇಳಾಪುರ ಸ್ವಾಮಿಗೌಡ ಹಾಗೂ ಪಾಂಡು ಮಾತನಾಡಿ, ರಾಜ್ಯದ ರೈತರು ಪರಿಹಾರ ಪಡೆಯುವ ಸಲುವಾಗಿ ಬರಗಾಲಕ್ಕಾಗಿ ಕಾಯುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತನ್ನ ಕೀಳುಮಟ್ಟದ ರಾಜಕೀಯ ಪ್ರದರ್ಶಿಸಿ ರೈತರನ್ನು ಅವಮಾನಿಸಿದ್ದಾರೆ. ರಾಜ್ಯದ ರೈತರೆಲ್ಲ ಸೇರಿ ಸಚಿವ ಶಿವಾನಂದ ಪಾಟೀಲ್‌ಗೆ ಲಕ್ಷ ಲಕ್ಷ ರೂ. ಪರಿಹಾರ ಸಂಗ್ರಹಿಸಿಕೊಡಲು ಸಿದ್ಧರಿದ್ದು, ಅವರೇ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಅವರನ್ನು ಜರಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ತಕ್ಷಣ ಸಚಿವ ಸಂಪುಟದಿಂದ ಆತನನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ತಕ್ಕ ಪ್ರತಿಫಲ ಅನುಭವಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.


ಬಳಿಕ ತಮ್ಮ ಬೇಡಿಕೆಗಳಿರುವ ಮನವಿ ಪತ್ರವನ್ನು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರ ಮೂಲಕ ಸರ್ಕಾರಕ್ಕೆ ರವಾನಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಕಡತನಾಳು ಬಾಲಣ್ಣ, ಶ್ರೀನಿವಾಸ ಅಗ್ರಹಾರ ಶಂಕರೇಗೌಡ, ಕೆ.ಶೆಟ್ಟಹಳ್ಳಿ ಶ್ರೀಕಂಠೇಗೌಡ, ನಾಗೇಂದ್ರ, ದರಸಗುಪ್ಪೆ ಮಂಜುನಾಥ್, ಡಿ.ಎಂ.ಕೃಷ್ಣೇಗೌಡ, ದೊಡ್ಡಪಾಳ್ಯ ಜಯರಾಮೇಗೌಡ,ಎಂ.ಶೆಟ್ಟಹಳ್ಳಿ ಪುರುಷೋತ್ತಮ, ಬಾಬುರಾಯನಕೊಪ್ಪಲು ಬಿ.ಎಸ್.ರಮೇಶ್, ಕೃಷ್ಣಪ್ಪ, ಪ್ರಿಯಾ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net