

ಹುಣಸೂರು: ತಾಲೂಕಿನ ರತ್ನಪುರಿ 1 ಮತ್ತು ರತ್ನಪುರಿ 2ನೇ ಕಾಲನಿ ಮಾಜಿ ಸೈನಿಕರ ಕುಟುಂಬ ಮತ್ತು ಅವಲಂಬಿತರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ನಾಗೇಶ್ ರಾವ್ ಮೆಂಗಾಣೆ, ಎರಡನೇ ವಿಶ್ವಯುದ್ಧ ನಡೆದು 8 ದಶಕಗಳೇ ಆಗಿದ್ದರೂ ಯುದ್ಧದಲ್ಲಿ ಹೋರಾಡಿ ಮಡಿದ ವೀರಯೋಧರ ಕುಟುಂಬಗಳ ಬೇಡಿಕೆಗಳನ್ನು ಸರ್ಕಾರಗಳು ಇಂದಿಗೂ ಪರಿಹರಿಸಿಲ್ಲ. ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕರ ಸಂಬಳದಿಂದ ಖರೀದಿಸಿರುವ ಎರಡು ಎಕರೆ ಭೂಮಿಯನ್ನು ಮಾಜಿ ಸೈನಿಕರ ಕುಟುಂಬಕ್ಕೆ ಕೊಡಬೇಕಿದೆ. ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕರ ಮಕ್ಕಳು ವ್ಯವಸಾಯ ಮಾಡುತ್ತಿರುವ ಭೂಮಿಯನ್ನು ಅವರಿಗೆ ಉಳಿಸಿಕೊಡಬೇಕು. ಇತ್ತೀಚೆಗೆ ಮಾಜಿ ಸೈನಿಕರ ಮಕ್ಕಳು ಮಾಡುತ್ತಿರುವ ಭೂಮಿಯನ್ನು ಬೇರೆಯವರಿಗೆ ಖಾತೆ ಮಾಡಿರುವುದು ಅನ್ಯಾಯವಾಗಿದ್ದು ಇದನ್ನು ವಜಾಗೊಳಿಸಿ, ಮಾಜಿ ಸೈನಿಕರ ಮಕ್ಕಳಿಗೆ ವಾಪಸ್ ಕೊಡಬೇಕು. ಸ್ಥಳೀಯವಾಗಿ ಮಾಜಿ ಸೈನಿಕರ ಭೂಮಿಯಲ್ಲಿ ಅಕ್ರಮವಾಗಿ ಕಾಮಗಾರಿಗಳನ್ನು ನಡೆಸಿ ಮಣ್ಣನ್ನು ಸಹ ಮಾರಾಟ ಮಾಡಿರುವ ಉಯಿಗೊಂಡನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಪಿ.ಕೆ.ಸೋಮಣ್ಣ ಮಾತನಾಡಿ, ರತ್ನಪುರಿ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಮಾಜಿ ಸೈನಿಕರಿಗೆ ಸೇರಿರುವ ಖಾಲಿ ನಿವೇಶನಗಳನ್ನು ರಾಜ್ಯಪಾಲರ ಹೆಸರಿಗೆ ವರ್ಗಾಯಿಸಿರುವುದನ್ನು ವಜಾಗೊಳಿಸಿ ಮಾಜಿ ಸೈನಿಕರ ಮಕ್ಕಳಿಗೆ ಕೊಡಬೇಕು. ಮಾಜಿ ಸೈನಿಕರ ಗ್ರಾಮಗಳಾದ ರತ್ನಪುರಿ ಚೌಡಿ ಕಟ್ಟೆ ಗ್ರಾಮಗಳ ಸರ್ವೇ ಮಾಡಿಸಿ ಗಡಿ ಗುರುತಿಸಿ 70 ವರ್ಷಗಳಿಂದ ವಿವಿಧ ಸವಲತ್ತುಗಳು ಸಿಗದೇ ಪರಿತಪಿಸುತ್ತಿರುವ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಬಾಲಸುಬ್ರಹ್ಮಣ್ಯಂ ಉಪಾಧ್ಯಕ್ಷ ಸ್ವಾಮಿನಾಥನ್, ಖಜಾಂಚಿ ಡೇವಿಡ್ ರತ್ನಪುರಿ, ಸುದರ್ಶನ್ ಸಿಂಗ್, ಬೋಜರಾಜ್ ಚೌಡಿಕಟ್ಟೆ, ಬಾಬಣ್ಣ, ಬೇಬಿ ಸರೋಜಿನಿ ಇತರರು ಹಾಜರಿದ್ದರು. ಮನವಿಯನ್ನು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್‌ಗೆ ನೀಡಲಾಯಿತು.