5ರಂದು ದಲಿತ್ ರೈಟ್ಸ್ ಮೂಮೆಂಟ್‌ನಿಂದ ಪ್ರತಿಭಟನೆ

02 gkp 01
Published on

ಗೋಣಿಕೊಪ್ಪ: ಕೊಡಗಿನ ಭೂ ಮಾಲೀಕರ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ, ಲೈನ್‌ಮನೆಯಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಮಾ.5 ರಂದು ಪೊನ್ನಂಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ದಲಿತ್ ರೈಟ್ಸ್ ಮೂವ್‌ಮೆಂಟ್‌ನ ರಾಜ್ಯ ಸಂಚಾಲಕ ರಮೇಶ್ ಮಾಯಮುಡಿ ತಿಳಿಸಿದರು.


ಭೂ ಮಾಲೀಕರ ಲೈನ್‌ಮನೆಯಲ್ಲಿ ಹಲವು ದಶಕಗಳಿಂದ ಇಲ್ಲಿನ ಆದಿವಾಸಿಗಳು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿಯತನಕ ಸರ್ಕಾರ ಕನಿಷ್ಠ ನಿವೇಶನ ನೀಡುವಲ್ಲಿ ವಿಫಲವಾಗಿದೆ. ಇದರಿಂದ ಆದಿವಾಸಿಗಳು ಇನ್ನೂ ಸ್ವಂತ ಸೂರನ್ನು ಹೊಂದಲು ಸಾಧ್ಯವಾಗಿಲ್ಲ. ಕಳೆದ 18 ವರ್ಷಗಳಿಂದ ನಮ್ಮ ಸಂಘಟನೆ ನಿರಂತರ ಹೋರಾಟಗಳನ್ನು ನಡೆಸಿ ಸರ್ಕಾರದ ಗಮನಕ್ಕೆ ತಂದರೂ ಈ ಬಗ್ಗೆ ಇಲಾಖಾಧಿಕಾರಿಗಳು ಹಾಗೂ ಸರ್ಕಾರ ಆದಿವಾಸಿಗಳಿಗೆ ನಿವೇಶನ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಲೇ ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರಿಂದ ಜ.31ರ ಒಳಗೆ ಭೂಮಿ ವಾಪಸ್ ಪಡೆಯಲು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಕೊಡಗು ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಕೊಡಗು ಜಿಲ್ಲೆಯ ಇಬ್ಬರು ಶಾಸಕರು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಆಯಾಯ ಭೂ ಮಾಲೀಕರಿಗೆ ನೀಡುವಂತೆ ಚರ್ಚೆ ನಡೆಸಿದ್ದಾರೆ. ಇಂತಹ ಪ್ರಕ್ರಿಯೆಯನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಇಲ್ಲಿಯ ತನಕ ಆದಿವಾಸಿಗಳಿಗೆ ವಾಸಿಸಲು ಕನಿಷ್ಠ ನಿವೇಶನ ಮಂಜೂರು ಮಾಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಭೂಮಿ ಹೊಂದಿರುವ ಭೂ ಮಾಲೀಕರಿಗೆ ಮತ್ತೆ ಭೂಮಿ ನೀಡುವುದು ಸರಿಯಲ್ಲ. ಇದು ಬಡವರಿಗೆ ಮಾಡುತ್ತಿರುವ ಅನ್ಯಾಯ. ಕೊಡಗಿನಲ್ಲಿ ಜೀತ ಪದ್ಧತಿ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಹಲವು ದೂರುಗಳು ದಾಖಲಾಗಿವೆ. ಇದರ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕಾಗಿದೆ. ಭೂ ಮಾಲೀಕರ ಲೈನ್‌ಮನೆಯಲ್ಲಿ ವಾಸ ಮಾಡುವ ಆದಿವಾಸಿಗಳಿಗೆ ನಿವೇಶನ ಮಂಜೂರು ಮಾಡಿದ್ದಲ್ಲಿ ಇಂತಹ ದೂರುಗಳು ದಾಖಲಾಗುತ್ತಿರಲಿಲ್ಲ. ಲೈನ್‌ಮನೆಯಲ್ಲಿ ವಾಸ ಮಾಡುತ್ತಿರುವ ಸಾವಿರಾರು ಕುಟುಂಬಗಳಿಗೆ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಸರ್ಕಾರದಿಂದ ಮಂಜೂರಾಗುವ ಯೋಜನೆಗಳು ದಲಿತರಿಗೆ ನೇರವಾಗಿ ಲಭಿಸುತ್ತಿಲ್ಲ. ಬಲಾಡ್ಯರು ಈ ಸವಲತ್ತುಗಳನ್ನು ಹೊಂದುತ್ತಿರುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರ ಹಾಗೂ ಕೊಡಗಿನ 2 ಶಾಸಕರು ವಿಶೇಷ ಗಮನಹರಿಸಬೇಕು. ದಲಿತರು ಸರ್ಕಾರಿ ಕಚೇರಿಗೆ ತೆರಳಿದ ವೇಳೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಎಂಬ ದೂರುಗಳು ವ್ಯಕ್ತವಾಗುತ್ತಿವೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಅಶೋಕ್, ಗೌರಿ ಹಾಗೂ ತಿಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net