

ಶ್ರೀರಂಗಪಟ್ಟಣ: ರಾಜ್ಯದ ಜನರ ಗಂಭೀರ ಪರಿಸ್ಥಿತಿ ಕಡೆಗಣಿಸಿ ನದಿ ಮೂಲಕ ಕಾವೇರಿ ನೀರು ಹರಿಸಿ ತಮ್ಮ ಪಕ್ಷದ ಸ್ವಾರ್ಥ ರಾಜಕಾರಣಕ್ಕೆ ತಮಿಳುನಾಡು ಹಿತ ಕಾದಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಯಾವ ನೈತಿಕತೆಯೂ ಉಳಿದಿಲ್ಲ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ವಾಗ್ದಾಳಿ ನಡೆಸಿದರು.
ಪಟ್ಟಣದ ಕುವೆಂಪು ವೃತ್ತದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಬುಧವಾರ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಕೆಲಕಾಲ ಪ್ರತಿಭಟಿಸಿ ಮಾತನಾಡಿದರು.
ನಮ್ಮ ರಾಜ್ಯ- ನಮ್ಮ ತೆರಿಗೆ, ನಮ್ಮ ಹಕ್ಕು, ಇದೇ ನಮ್ಮ ಸ್ವಾಭಿಮಾನದ ಮಂತ್ರ ಎಂದು ಪ್ರತಿಪಾದಿಸುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಲ್ಲಿ ಕೇಂದ್ರ ಬಿಜೆಪಿ ಸರ್ಕಾರವನ್ನು ಪ್ರಶ್ನಿಸುವ ಹಾಗೂ ಕನ್ನಡಿಗರಿಗೆ ಉತ್ತರಿಸುವ ಯಾವ ನೈತಿಕತೆಯೂ ಉಳಿಸಿಕೊಂಡಿಲ್ಲ. ನಮ್ಮ ನೆಲದ ಮೇಲೆ ಬಿದ್ದ ಮಳೆ, ನಮ್ಮ ನೆಲದ ಅಣೆಕಟ್ಟೆಯಲ್ಲಿ ಸಂಗ್ರಹಿಸಿದ ಕಡಿಮೆ ನೀರನ್ನು ಇಂತಹ ಭೀಕರ ಬರಗಾಲದಲ್ಲಿ ನಮ್ಮ ರೈತರ ಕೃಷಿ ಬೆಳೆಗೆ, ನಮ್ಮ ಜನ-ಜಾನುವಾರುಗಳ ಕುಡಿಯುವ ನೀರಿಗೆ ಬಳಸದೆ ಪಕ್ಕದ ರಾಜ್ಯಕ್ಕೆ ಹರಿಯಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಂಬಾಡಿ ಅಣೆಕಟ್ಟೆಯಲ್ಲಿ ಸಂಗ್ರಹಿಸಿದ್ದ ನೀರನ್ನು ತಮಿಳುನಾಡಿಗೆ ಹರಿಸಿ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರಿಲ್ಲದಂತೆ ಮಾಡಿ ಅನ್ಯಾಯ ಎಸಗಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ನಾಲೆಗಳಿಗೆ ನೀರು ಹರಿಸದಿದ್ದರೆ ನಮ್ಮ ರೈತಾಪಿ ಜನರು ಸಾಕಷ್ಟು ಸಮಸ್ಯೆಗೆ ಸಿಲುಕುತ್ತಾರೆ. ಅಂತರ್ಜಲ ಕುಸಿದು ಸ್ಮಶಾನ ವಾತಾವರಣ ನಿರ್ಮಾಣವಾಗಲಿದೆ. ನಮ್ಮ ಶಾಸಕರು ಸರ್ಕಾರದ ಮಂತ್ರಿಗಳ ಮುಂದೆ ಮಂಡ್ಯ ಜಿಲ್ಲೆಯ ಸ್ವಾಭಿಮಾನವನ್ನು ಒತ್ತೆಯಿಟ್ಟು ಹೇಳಿದ್ದಕ್ಕೆ ತಲೆಯಾಡಿಸಿ ನಿಂತು ರೈತಾಪಿ ಜನರ ಭವಿಷ್ಯ ಹಾಳುಮಾಡಿ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ. ಈಗ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಹೆಸರಲ್ಲಿ ನೀರು ಹರಿಸುತ್ತಿರುವ ಇವರಿಗೆ ಜಿಲ್ಲೆ ಸೇರಿದಂತೆ ರಾಜ್ಯದ ಜನರು ತಕ್ಕಪಾಠ ಕಲಿಸಬೇಕಿದೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಹನಿಯಂಬಾಡಿ ನಾಗರಾಜು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ದರ್ಶನ್, ಸಂಚಾಲಕರಾದ ಜಗದೀಶ್, ಪಾಲಹಳ್ಳಿ ರಾಮಚಂದ್ರು, ಬಲ್ಲೇನಹಳ್ಳಿ ಮಂಜುನಾಥ್, ದೊಡ್ಡಪಾಳ್ಯ ಮಹೇಶ್, ದರಸಗುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ರವಿ ಲಕ್ಷ್ಮಣ, ಪೈ.ನಾಗಣ್ಣ ಇತರರು ಪಾಲ್ಗೊಂಡಿದ್ದರು.