

ವಿಜಯಪುರ: ದೇಶ ವಿಭಜನೆ ಕುರಿತು ಮಾತನಾಡಿರುವ ಸಂಸದ ಡಿ.ಕೆ. ಸುರೇಶ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗಳನ್ನ ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿ ನಂತರ ನಗರದ ಕೋರ್ಟ್ ಬಳಿಯ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರಿಂದ ರಸ್ತೆಯ ಮೇಲೆಯೇ ಕುಳಿತು ಪ್ರತಿಭಟನೆ ನಡೆಸಲು ಬಿಜೆಪಿ ಕಾರ್ಯಕರ್ತರು ಮುಂದಾದರು.
ನಂತರ ಸ್ಥಳದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಸಗಾಯಿ, ಅಶೋಕ ರಾಠೋಡ, ಕಾಂತು ಶಿಂದೆ, ಮಲ್ಲಮ್ಮ ಜೋಗುರ, ಶ್ರೀಧರ ಬಿಜ್ಜರಗಿ, ವಿಠಲ ನಡುವಿನಕೇರಿ, ಸುಶ್ಮಿತಾ ವಾಂಡ್ಕರ, ರಾಹುಲ್ ಔರಂಗಾಬಾದ, ರವಿ ಚವಾಣ, ಅನಿಲ ಉಪ್ಪಾರ, ಪ್ರವೀಣ್ ಕೂಡಗಿ, ರಾಮಚಂದ್ರ ಚವಾಣ, ರಾಜಕುಮಾರ ಗೌಂಡಿ, ಅರವಿಂದ ಹಡಗಲಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.