More

    ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ

    ವಿಜಯಪುರ: ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

    ಆಲಮಟ್ಟಿ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಲಸಂಪನ್ಮೂಲ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ತಪ್ಪಿಸಲು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಸದ್ಭಳಕೆಗೆ ಮಾತ್ರ ಬಳಸಬೇಕು. ಅಧಿಕಾರಿಗಳು ದೀರ್ಘಾವಧಿ ಯೋಜನೆ ರೂಪಿಸಿಬೇಕು.

    ಈಗಿದ್ದ ನೀರನ್ನು ಮುಂದಿನ ಜುಲೈವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಸ್ಥಳೀಯ ಜನಪ್ರತಿನಿಧಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ಸಿದ್ದಪಡಿಸಿಕೊಳ್ಳಬೇಕು. ಜನರಿಗೆ ಬೇಸಿಗೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದರು.

    ಬಹುಹಳ್ಳಿ ಕುಡಿಯುವ ನೀರಿನ ಕೆರೆ ತುಂಬಿಸುವ ಯೋಜನೆಯಡಿ ಇರುವ ಸಣ್ಣಪುಟ್ಟ ಅಡೆ-ತಡೆಗಳನ್ನು ನಿವಾರಿಸಿಕೊಂಡು ಕೊನೆಯಂಚಿನವರೆಗೆ ನೀರು ಹರಿಸಲು ಕ್ರಮ ವಹಿಸುವಂತೆ ಸೂಚಿಸಿದರು.

    ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಲಮಟ್ಟಿಯಲ್ಲಿ ಪ್ರವಾಸಿಗರ ವಾಹನಗಳಿಗೆ ಸೂಕ್ತ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಪ್ರತಿದಿನ ಭೇಟಿ ನೀಡುವ ಪ್ರವಾಸಿಗರ ತಾಣದಲ್ಲಿ ಸಿಸಿಟಿವಿ ಅಳವಡಿಸಿ ಪ್ರವಾಸಿಗರ ಮಾಹಿತಿ ಮತ್ತು ವಿವರವನ್ನು ಸಂಗ್ರಹಿಸಬೇಕು.

    ಅವಳಿ ಜಿಲ್ಲೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಷಯ ಸಂಬಂಧಿಸಿದಂತೆ ಮುಂದಿನ ಬಜೆಟ್‌ನಲ್ಲಿ ಸಭೆ ಕರೆದು ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

    ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕರಾದ ಸಿ.ಎಸ್. ನಾಡಗೌಡ, ಯಶವಂತರಾಯಗೌಡ ಪಾಟೀಲ, ವಿಠಲ ಕಟಕದೊಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ವಿಪ ಸದಸ್ಯ ಪ್ರಕಾಶ ರಾಠೋಡ, ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನರಾಜ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಮುಖ್ಯ ಅಭಿಯಂತರ ಎಚ್.ಎನ್. ಶ್ರೀನಿವಾಸ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts