ಬಿಜೆಪಿ ಮುಖಂಡರ ಪ್ರತಿಭಟನೆ

11mdk06
ಕೊಡಗು ವಿವಿ ಉಳಿಸುವುದು ಸೇರಿದಂತೆ ಕೊಡಗಿನ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
Published on

ಕುಶಾಲನಗರ: ಕೊಡಗು ವಿಶ್ವವಿದ್ಯಾಲಯ ಮುಚ್ಚಲಾಗುವುದು, ವಿಲೀನಗೊಳಿಸಲಾಗುವುದು... ಹೀಗೆ ಒಂದೊಂದು ಹೇಳಿಕೆ ಕೊಡುವ ಮೂಲಕ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಆರೋಪಿಸಿದರು.

ಕೊಡಗು ವಿವಿ ಉಳಿಸುವುದು ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಬಿಜೆಪಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕೊಡಗು ವಿಶ್ವವಿದ್ಯಾಲಯ ರದ್ದುಗೊಳಿಸುವುದು ಅಥವಾ ವಿಲೀನಗೊಳಿಸುವ ಸರ್ಕಾರದ ಚಿಂತನೆಯ ಬಗ್ಗೆ ತಕ್ಷಣ ಮುಖ್ಯಮಂತ್ರಿ ಅಧಿಕೃತ ಹೇಳಿಕೆ ನೀಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಮೂಡಿರುವ ಗೊಂದಲ ನಿವಾರಿಸಬೇಕಾಗಿದೆ.

ಬಜೆಟ್ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವ ಬಗ್ಗೆ ಹೇಳಿಕೆ ನೀಡಿರುವುದು. ನಂತರ ಬೆಂಗಳೂರಿಗೆ ತೆರಳಿದ ನಿಯೋಗಕ್ಕೆ ಉತ್ತರಿಸಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಪ್ಪಚ್ಚು ರಂಜನ್, ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ವಿವಿಯನ್ನು ಉಳಿಸುವ ಸಂಬಂಧವಾಗಿ ಬಹಿರಂಗವಾಗಿ ಹೇಳಿಕೆ ನೀಡಬೇಕಾಗಿದೆ. ಕೊಡಗು ವಿವಿ ಉಳಿಸಿ ಅಭಿವೃದ್ಧಿಗೊಳಿಸುವಂತೆ ಬಿಜೆಪಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗು ವಿವಿ ನಿರ್ಮಾಣಗೊಂಡಿದ್ದು, ಕಾಂಗ್ರೆಸ್ ಸರ್ಕಾರ ಇದುವರೆಗೆ ಅನುದಾನ ಬಿಡುಗಡೆಗೊಳಿಸಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಕೊಡಗು ವಿವಿ ಅಭಿವೃದ್ಧಿ ಸಲುವಾಗಿ ಎರಡು ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಈ ಸಂಬಂಧ ಜಿಲ್ಲೆಯಿಂದ ರಾಜ್ಯಪಾಲರ ಬಳಿ ನಿಯೋಗ ತೆರಳಿ ಕೊಡಗು ವಿವಿಯನ್ನು ಉಳಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಗಮನ ಸೆಳೆಯಲಾಗುವುದು. ಕೊಡಗು ವಿವಿಯನ್ನು ಉಳಿಸುವ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು.

ಕೊಡಗು ವಿವಿ ರದ್ದುಪಡಿಸಲು ಹೊರಟಿರುವುದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣ ದುರುಪಯೋಗ, ಸಿ ಮತ್ತು ಡಿ ಜಾಗವನ್ನು ಅರಣ್ಯೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಗಳು ಮತ್ತು ಅಲ್ಪಸಂಖ್ಯಾತರ ಓಲೈಕೆಗಾಗಿ ಬಜೆಟ್‌ನಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ನೀತಿಯನ್ನು ಅಪ್ಪಚ್ಚು ರಂಜನ್ ಖಂಡಿಸಿದರು. ಸರ್ಕಾರದ ಈ ಎಲ್ಲ ಚಿಂತನೆಗಳನ್ನು ಖಂಡಿಸಿ ಸದ್ಯದಲ್ಲಿಯೇ ಕೊಡಗು ಬಂದ್ ಮಾಡುವ ಎಚ್ಚರಿಕೆ ನೀಡಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಪ್ರಗತಿ ಪಥದಲ್ಲಿರುವ ಕೊಡಗು ವಿವಿಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರತಿನಿಧಿಗಳು ಅನವಶ್ಯಕ ಹೇಳಿಕೆ ನೀಡಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅಧಿಕೃತ ಹೇಳಿಕೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಬಿಜೆಪಿ ತಂದ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವುದೇ ಸರ್ಕಾರದ ಷಡ್ಯಂತ್ರ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಜಿಲ್ಲೆಯ ಪ್ರಸಕ್ತ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಕೊಡಗು ಬಂದ್ ನಿಶ್ಚಿತ ಎಂದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿದರು.

ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಕುಶಾಲನಗರ ಮಂಡಲ ಅಧ್ಯಕ್ಷ ಎಂ.ಎಂ. ಚರಣ್, ಕಾರ್ಯದರ್ಶಿ ಮಧುಸೂದನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಪದಾಧಿಕಾರಿಗಳು, ತಾಲೂಕು ಮಟ್ಟದ ಪ್ರಮುಖರು, ಕಾರ್ಯಕರ್ತರು, ಮಹಿಳಾ ಮೋರ್ಚಾ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net