ಭಾರತೀಯ ಜನತಾ ಪಾರ್ಟಿಯಿಂದ ಪ್ರತಿಭಟನೆ

20-KGLPHOTO-1,,,,,,,
Published on

ಕೊಳ್ಳೇಗಾಲ: ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಗುರುವಾರ ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಯಿತು.


ಪಟ್ಟಣದ ಶ್ರೀದೇವರ ದಾಸಿಮಯ್ಯ ವೃತ್ತದ ಮುಂಭಾಗದಲ್ಲಿ ಸಮಾವೇಶಗೊಂಡ ನಗರ ಮಂಡಲ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.


ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ವಿ.ಪರಮೇಶ್ವರಯ್ಯ ಮಾತನಾಡಿ, ಬರಗಾಲದಲ್ಲಿ ನೊಂದಿರುವ ಜನರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಏರಿಕೆ ಬಿಸಿ ಮುಟ್ಟಿಸಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇನ್ನು ತೈಲ ಬೆಲೆಗಳು ಏರಿಕೆಯಾದರೆ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಕಷ್ಟವಾಗಲಿದೆ. ಇಂತಹ ಜನ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದರು.


ಬಿಜೆಪಿ ಮುಖಂಡ ಬಸವರಾಜಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಿಂದೆ ಎಸ್ಸಿ-ಎಸ್ಟಿಗಳಿಗೆ ಮೀಸಲಿಟ್ಟಿದ್ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರು. ಇದೀಗ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳು ಬೆಲೆ ಏರಿಕೆ ಮಾಡಿದ್ದು, ಅದರಂತೆ, ಈಗ ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಏರಿಕೆ ಮಾಡಿದ್ದಾರೆ. ಈ ಸರ್ಕಾರ ಜನ ವಿರೋಧಿ ಆಡಳಿತ ನಡೆಸುತ್ತಿದೆ. ಈ ಕೂಡಲೇ ಅಧಿಕಾರದಿಂದ ಕೆಳಗಿಳಿದು ಮತ್ತೆ ಚುನಾವಣೆ ಎದುರಿಸಲಿ, ಆಗ ಜನ ಪಾಠ ಕಲಿಸುತ್ತಾರೆ ಎಂದರು.


ಬಿಜೆಪಿ ಎಸ್ಸಿ ಮೋರ್ಚಾ ನಗರ ಮಂಡಲ ಅಧ್ಯಕ್ಷ ಸಿದ್ದಪ್ಪಾಜಿ, ಯುವ ಮೋರ್ಚಾ ಅಧ್ಯಕ್ಷ ಆನಂದ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಶೀಲಾ ಶಾಂತರಾಜು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬೂದಿತಿಟ್ಟು ಶಿವಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್, ನಗರಸಭೆ ಸದಸ್ಯ ಪ್ರಕಾಶ್, ಸಿರಿಶಾ ಸತೀಶ್ ಮುಖಂಡರಾದ ಬೆಂಡರಹಳ್ಳಿ ಮಹೇಶ್, ಉತ್ತಮ್, ಶಿವಕುಮಾರ್, ಕಿರಣ್, ಸೋಮಣ್ಣ ಉಪ್ಪಾರ್, ರಾಜೇಶ್, ನಿರಂಜನ್, ಮಮತಾ ಬದ್ರೀನಾಥ್, ಸುರೇಶ್, ತೇರಂಬಳ್ಳಿ ರವಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net