

ಶನಿವಾರಸಂತೆ: ರಸ್ತೆ ಬದಿಯಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸ ಕಾರಣ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ದುಂಡಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶನಿವಾರಸಂತೆ, ದುಂಡಳ್ಳಿ, ಚಂಗಡಹಳ್ಳಿ ಮೂಲಕ ಯಸಳೂರುಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ರಸ್ತೆಯನ್ನು ಲೋಕೋಪಯೋಗಿ ಇಲಾಖೆ 9 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ 2023ರಲ್ಲಿ ಗುತ್ತಿಗೆ ನೀಡಿತು. ಅದರಂತೆ ಗುತ್ತಿಗೆದಾರರು ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ರಸ್ತೆ ವಿಸ್ತರಣೆ ಸಂದರ್ಭ ರಸ್ತೆ ಬದಿಯಲ್ಲಿರುವ ಮತ್ತು ಖಾಸಗಿಯವರ ತೋಟದ ಬೇಲಿಯಲ್ಲಿರುವ ಮರಗಳನ್ನು ತೆರವುಗೊಳಿಸುವ ಅಗತ್ಯ ಕಂಡುಬಂದ ಹಿನ್ನೆಲೆಯಲ್ಲಿ ಪಿಡಬ್ಲುೃಡಿ ಅರಣ್ಯ ಇಲಾಖೆಗೆ ಮರ ತೆರವುಗೊಳಿಸುವಂತೆ ಮನವಿ ಮಾಡಿತ್ತು. ಜತೆಗೆ ಅರಣ್ಯ ಇಲಾಖೆಗೆ 16 ಲಕ್ಷ ರೂ. ಪಾವತಿಸಿತ್ತು. ಈ ಸಂಬಂಧ 15 ದಿನಗಳ ಒಳಗಡೆ ಮರ ತೆರವುಗೊಳಿಸುವುದಾಗಿ ವಾಗ್ದಾನ ನೀಡಿದ್ದ ಅರಣ್ಯ ಇಲಾಖೆ ಎರಡು ವರ್ಷಗಳಾದರೂ ತೆರವುಗೊಳಿಸಿಲ್ಲ. ಈ ನಡುವೆ ಗುತ್ತಿಗೆದಾರರು ಮೂರು ಕಿ.ಮೀ.ದೂರ ರಸ್ತೆ ವಿಸ್ತರಣೆ ಕಾಮಾಗಾರಿ ಮಾಡಿದ್ದಾರೆ. ಆದರೆ ಮರಗಳು ರಸ್ತೆ ಬದಿಯಲ್ಲಿರುವುದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಅಪೂರ್ಣ ಕಾಮಗಾರಿಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ ರಸ್ತೆ ಬದಿಯಲ್ಲಿರುವ ಮನೆಗಳಿಗೆ ಧೂಳು ಆವರಿಸಿಕೊಳ್ಳುತ್ತಿದೆ. ಇದರಿಂದ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮರಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಪಿಡಬ್ಲುೃಡಿ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಡಿಸಿಎಫ್ ಆಗಮಿಸಬೇಕೆಂದು ಪಟ್ಟ ಹಿಡಿದರು. ಶನಿವಾರಸಂತೆ ಆರ್‌ಎಫ್‌ಒ ಪೂಜಶ್ರೀ, ಪಿಡಬ್ಲುೃಡಿ ಮುಖ್ಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ಮೇಲಧಿಕಾರಿಗಳ ಗಮನಕ್ಕೆ ತಂದು ಮರಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ನಿಮಗೆ ಒಂದು ವಾರ ಸಮಯ ಕೊಡುತ್ತೇವೆ. ವಾರದೊಳಗೆ ಮರಗಳನ್ನು ತೆರವುಗೊಳಿಸದಿದ್ದರೆ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿ ಪ್ರತಿಭಟನೆಯನ್ನು ಹಿಂಪಡೆದರು.
ದುಂಡಳ್ಳಿ ಸುಬ್ರಮಣಿ, ಎಸ್.ಎನ್.ರಘು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ದೇವರಾಜ್, ರಂಗರಾಜ್, ಉಮೇಶ್, ಕಾರ್ತಿಕ್, ರಮೇಶ್,ನಾಗರಾಜ್, ಗಿರೀಶ್, ಚಂದ್ರಣ್ಣ ಮುಂತಾದವರಿದ್ದರು. ಸ್ಥಳಕ್ಕೆ ಕುಶಾಲನಗರ ಸಿಐ ರಾಜೇಶ್ ಕೋಟ್ಯಾನ್, ಶನಿವಾರಸಂತೆ ಎಸ್‌ಐ ಚಂದ್ರು ಭೇಟಿ ನೀಡಿದ್ದರು.