ಆಟೋ ಚಾಲಕರಿಂದ ಪ್ರತಿಭಟನೆ

HUN-AUG-1-2(BUS STAND STRIKE)
ಹುಣಸೂರು ನಗರದ ಬಸ್‌ನಿಲ್ದಾಣದ ಆವರಣದಲ್ಲಿ ಸತ್ಯ ಎಂಎಎಸ್ ಫೌಂಡೇಷನ್ ಮತ್ತು ಆಟೋ ಚಾಲಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸತ್ಯಪ್ಪ, ರಾಕೇಶ್‌ರಾವ್, ಬೆಂಕಿ ಮಹದೇವ್, ರವಿರಾಜು, ಮಂಜು, ಸಿದ್ದಪ್ಪ, ಸಲ್ಮಾನ್ ಇತರರಿದ್ದಾರೆ.
Published on

ಹುಣಸೂರು: ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸುವುದನ್ನು ವಿರೋಧಿಸಿ ಬಸ್‌ನಿಲ್ದಾಣದ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಮತ್ತು ಸತ್ಯ ಎಂಎಎಸ್ ಫೌಂಡೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಪ್ರತಿಭಟನೆ ನಡೆಸಿ ಪೆಟ್ರೋಲ್ ಬಂಕ್ ಬೇಡ, ಬಸ್ ಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನಸೆಳೆದರು.

ಈ ವೇಳೆ ಮಾತನಾಡಿದ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ, ಹುಣಸೂರು ಬಸ್ ನಿಲ್ದಾಣಕ್ಕೆ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಾರ್ವಜನಿಕರು ಬಂದು ಹೋಗುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಇಲ್ಲಿ ಸಿಸಿ ಕ್ಯಾಮರಾವನ್ನೂ ಅಳವಡಿಸಿಲ್ಲ. ನಿಲ್ದಾಣದ ಆವರಣದೊಳಗೆ ನೂರಾರು ದ್ವಿಚಕ್ರ ವಾಹನಗಳು, ಕಾರು, ವ್ಯಾನ್‌ಗಳಿಗೆ ಪಾರ್ಕಿಂಗ್‌ಗೆ ಕೆಎಸ್‌ಆರ್‌ಟಿಸಿ ನಿಗಮ ಅವಕಾಶ ನೀಡುವ ಮೂಲಕ ಇಡೀ ಬಸ್‌ನಿಲ್ದಾಣ ಕಿಷ್ಕಿಂಧೆಯಾಗಿ ಮಾರ್ಪಟ್ಟಿದೆ. ಈ ನಡುವೆ ಬಸ್‌ನಿಲ್ದಾಣದ ಮುಖ್ಯದ್ವಾರದ ಬಳಿಯಿರುವ ಆಟೋ ಸ್ಟಾೃಂಡನ್ನು ತೆರವುಗೊಳಿಸಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಕಂಪನಿಯ ಪೆಟ್ರೋಲ್ ಬಂಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಪೆಟ್ರೋಲ್ ಬಂಕ್ ಸ್ಥಾಪಿಸಿ ಇನ್ನಷ್ಟು ಗೊಂದಲಗಳಿಗೆ ಅವಕಾಶ ನೀಡಲಾಗುತ್ತಿದೆ. ಇಷ್ಟಕ್ಕೂ ಬಸ್‌ನಿಲ್ದಾಣದ ನಾಲ್ಕು ಕಡೆಗಳಲ್ಲಿ ಕೂಗಳತೆಯಲ್ಲೇ 5 ಪೆಟ್ರೋಲ್ ಬಂಕ್‌ಗಳಿದ್ದು, ಬಸ್‌ನಿಲ್ದಾಣದ ಆವರಣದೊಳಗೆ ಪೆಟ್ರೋಲ್ ಬಂಕ್‌ನ ಅವಶ್ಯಕತೆಯಿರುವುದಿಲ್ಲ. ಆಟೋ ಚಲಾಯಿಸಿ ಜೀವನ ನಡೆಸುತ್ತಿರುವ ನೂರಾರು ಆಟೋ ಚಾಲಕರ ಕುಟುಂಬದ ಬದುಕಿಗೆ ಕೊಳ್ಳಿ ಇಡುವ ಯೋಜನೆ ಇದಾಗಿದ್ದು, ನಿಗಮ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ನಿಗಮದ ಡಿಟಿಒ ದಿನೇಶ್‌ಕುಮಾರ್ ಮತ್ತು ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ವಿಷಯದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಡಿಟಿಒ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ರಾಕೇಶ್‌ರಾವ್, ನಾಗಪ್ಪಶೆಟ್ಟಿ, ಪುರುಷೋತ್ತಮ್ ಸಾಳಂಕೆ, ಶಂಭುನಾಥ್, ಆಟೋ ಚಾಲಕರ ಸಂಘದ ಅಧ್ಯಕ್ಷ ರವಿರಾಜು, ಸದಸ್ಯರಾದ ಮಹದೇವಮೂರ್ತಿ, ಉಮೇಶ್, ಮಂಜು, ವೆಂಕಟಾಚಲ, ಸಿದ್ದಪ್ಪ, ನಾಗರಾಜು, ಶ್ರೀನಿವಾಸ್, ಜಮೀರ್, ಗಣೇಶ್, ಅಮಾನ್, ಸಿದ್ದಿಕ್, ಸಲ್ಮಾನ್ ಇತರರು ಇದ್ದರು.

ಬೇಡಿಕೆಗಳೇನು?: * ಹುಣಸೂರು-ಮೈಸೂರು ಮಾರ್ಗಕ್ಕೆ ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು. * ಹುಣಸೂರು-ಪಿರಿಯಾಪಟ್ಟಣ ಮಾರ್ಗಕ್ಕೆ ಹೆಚ್ಚಿನ ಬಸ್‌ಸೇವೆ ಸಿಗಬೇಕು. *ಬಸ್‌ನಿಲ್ದಾಣದಲ್ಲಿ ಪೊಲೀಸ್ ಪಹರೆ ಇರಿಸಬೇಕು. *ಬಸ್‌ನಿಲ್ದಾಣದ ಆವರಣದೊಳಗೆ ಖಾಸಗಿ ವಾಹನಗಳ ಪ್ರವೇಶ ಮತ್ತು ಪಾರ್ಕಿಂಗ್ ನಿಷೇಧಿಸಬೇಕು *ಹುಣಸೂರು ನಗರವನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 275(ಬೈಪಾಸ್‌ರಸ್ತೆ)ರಲ್ಲಿ ಸಿಎನ್‌ಜಿ ಪೆಟ್ರೋಲ್ ಬಂಕ್ ಸ್ಥಾಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net