ಅಂಬೇಡ್ಕರ್ ಸೈನ್ಯದ ಪದಾಧಿಕಾರಿಗಳಿಂದ ಪ್ರತಿಭಟನೆ

27 mlv 4
Published on

ಮಳವಳ್ಳಿ: ತಾಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನು ಭೂ ಕಬಳಿಕೆದಾರರಿಗೆ ಅಕ್ರಮವಾಗಿ ಭೂ ಕಬಳಿಕೆದಾರರಿಗೆ ಖಾತೆ ಮಾಡಿಕೊಟ್ಟಿರುವ ತಹಸೀಲ್ದಾರ್ ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಅಂಬೇಡ್ಕರ್ ಸೈನ್ಯದ ಪದಾಧಿಕಾರಿಗಳು ಬುಧವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.


ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿಯಿಂದ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ರ‌್ಯಾಲಿಯಲ್ಲಿ ಹೊರಟು ತಾಲೂಕು ಆಡಳಿತ ಸೌಧದ ಮುಂದೆ ಜಮಾವಣೆಗೊಂಡು ಧರಣಿ ನಡೆಸಿದರು.


ಸಂಘಟನೆ ಜಿಲ್ಲಾಧ್ಯಕ್ಷ ಸಿದ್ದರಾಜು ಮಾತನಾಡಿ, ಸರ್ಕಾರಿ ಗೋಮಾಳ ಮತ್ತು ಇತರ ಸರ್ಕಾರಿ ಜಮೀನನ್ನು ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪ್ರಕಾಶ್ ಹಾಗೂ ಈ ಹಿಂದಿನ ತಹಸೀಲ್ದಾರ್ ವಿಜಯಣ್ಣ ಅವರು ಭೂಗಳ್ಳರ ಜತೆ ಶಾಮೀಲಾಗಿ ಹಣ ಪಡೆದು, ನೂರಾರು ಕೋಟಿ ರೂ.ಬೆಲೆ ಬಾಳುವ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿದ್ದಾರೆಂದು ಆರೋಪಿಸಿದರು.


ಈ ಭೂ ಮಾಫಿಯಾದಲ್ಲಿ ಕಚೇರಿಯ ಅನೇಕರು ಸೇರಿರುವ ಕೈ ಜೋಡಿಸಿದ್ದಾರೆ. ತಾಲೂಕು ಕಚೇರಿ ಅಕ್ರಮಗಳ ಸ್ವರ್ಗವಾಗಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಜನಸಾಮಾನ್ಯರು ಮಾತನಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಬಿ.ಜಿ.ಪುರ ಹೋಬಳಿ ಹೆಬ್ಬಣಿ ಗ್ರಾಮ ವ್ಯಾಪ್ತಿ ಹಾಗೂ ಕಿರುಗಾವಲು ಹೋಬಳಿ ಅವೇರಹಳ್ಳಿ ಬಳಿ ನೂರಾರು ಎಕರೆ ಸರ್ಕಾರಿ ಭೂಮಿ ಸೇರಿದಂತೆ ನಾಲ್ಕು ಹೋಬಳಿಗಳ ವ್ಯಾಪ್ತಿಯಲ್ಲೂ ಅಕ್ರಮವಾಗಿ ಜಮೀನು ಖಾತೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಇಂಬು ನೀಡುವಂತೆ ಪ್ರಸ್ತುತ ಚೊಟ್ಟನಹಳ್ಳಿ ಸರ್ವೇ ನಂ.103 ರ 24 ಎಕರೆ ಜಮೀನನ್ನು ಒಂದೇ ಕುಟುಂಬದ ನಾಲ್ಕು ವ್ಯಕ್ತಿಗಳಿಗೆ ಅಕ್ರಮ ಖಾತೆ ಮಾಡಿ ಸಿಕ್ಕಿ ಬಿದ್ದಿರುವುದೇ ಸಾಕ್ಷಿಯಾಗಿದೆ ಎಂದರು.
ತಾಲೂಕಿನಲ್ಲಿ ಸರ್ಕಾರಿ ಭೂಮಿ ಕಬಳಿಸಲು ಅಕ್ರಮ ಖಾತೆ ಮಾಡಿಸಿಕೊಳ್ಳುವ ದೊಡ್ಡ ಜಾಲವೇ ಇದ್ದು, ಸರ್ಕಾರಿ ಭೂಮಿ ರಕ್ಷಣೆಗಾಗಿ ಕೂಡಲೇ ಈ ಪ್ರಕರಣವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸಿಒಡಿ ಮತ್ತು ಲೋಕಾಯುಕ್ತ ಸಂಸ್ಥೆಗಳಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿದ ಅವರು, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸುವಂತೆ ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಬಸವರಾಜು, ಖಜಾಂಚಿ ಮಲ್ಲು, ಜಿಪಂ ಮಾಜಿ ಸದಸ್ಯ ಪೂರಿಗಾಲಿ ಜಯರಾಜು, ಹಾಡ್ಲಿ ಸುರೇಶ್, ನಾಗರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net