

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್.ಎಚ್. ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿ, ಅವೈಜ್ಞಾನಿಕ ಕಾಮಗಾರಿಯಿಂದ ಜನರು ಸಂಚರಿಸಲು ಸಮಸ್ಯೆಯಾಗುತ್ತಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಮೌನವಾಗಿ ಉಳಿಯುವ ಬದಲು ಈ ಅವ್ಯವಸ್ಥೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕೆಂದರು. ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಎಸ್.ಮಾತನಾಡಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಥವಾ ಕೆಎನ್‌ಆರ್ ಸಂಸ್ಥೆಯ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಲಾಯಿತು. ಬಂಟ್ವಾಳ ಪುರಸಭೆ ಉಪಾಧ್ಯಕ್ಷ ಮೂನಿಷ್ ಆಲಿ, ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ತಲಪಾಡಿ, ಶಾಕೀರ್ ಅಳಕೆಮಜಲು, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಮುಷ್ತಾಕ್ ತಲಪಾಡಿ, ಕೊಳ್ನಾಡು ಬ್ಲಾಕ್ ಅಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರ್, ಕಲ್ಲಡ್ಕ ಬ್ಲಾಕ್ ಅಧ್ಯಕ್ಷ ಸತ್ತಾರ್ ಕಲ್ಲಡ್ಕ, ಸರಪಾಡಿ ಬ್ಲಾಕ್ ಅಧ್ಯಕ್ಷ ಹೈದರ್ ಕಾವಳಕಟ್ಟೆ, ಬಂಟ್ವಾಳ ಪುರಸಭಾ ಸಮಿತಿ ಉಪಾಧ್ಯಕ್ಷ ಯೂಸುಫ್ ಆಲಡ್ಕ ಭಾಗವಹಿಸಿದ್ದರು.