ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

12 hkr 05
Published on

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ

ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಉತ್ತರ ಕರ್ನಾಟಕ ರೈತ ಸಂಘದ ತಾಲೂಕು ಘಟಕದ ವತಿಯಿಂದ ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದಿವಗೀಹಳ್ಳಿ ಮಾತನಾಡಿ, ಕೃಷಿಯನ್ನೇ ನಂಬಿ ಬದುಕುವ ರೈತರ ಭೂಮಿ ಯಾರಾದರೂ ಖರೀದಿಸಬಹುದು ಎಂಬ ಕಾಯ್ದೆಯಿಂದ ಬಂಡವಾಳ ಶಾಹಿಗಳಿಗೆ, ಕಾರ್ಪೆರೇಟ್ ಸಂಸ್ಥೆಗಳಿಗೆ, ರೆಸಾರ್ಟ್- ರಿಯಲ್ ಎಸ್ಟೇಟ್ ನಡೆಸುವವರಿಗೆ ಅನುಕೂಲವಾಗಲಿದೆ. ಇದರಿಂದ ಜನಸಾಮಾನ್ಯರಿಗೆ ಪ್ರಯೋಜನವಿಲ್ಲ. ಸರ್ಕಾರ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ರೈತರಿಗೆ ಮಾರಕವಾಗುವ ಕಾಯ್ದೆ ಜಾರಿಗೊಳಿಸಿದರೆ ಆಹಾರ ಬೆಳೆಗಳ ಕೊರತೆ ಎದುರಾಗಲಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಈ ಕಾಯ್ದೆ ಮಾರಕವಾಗಲಿದೆ. ರೈತರೇ ಪ್ರಧಾನವಾಗಿರುವ ದೇಶದಲ್ಲಿ ರೈತರ ಮಗ್ಗಲು ಮುರಿಯುವಂಥ ಕಾನೂನನ್ನು ಸರ್ಕಾರ ಜಾರಿ ಮಾಡಬಾರದು. ಸರ್ಕಾರ ರೈತ ಪರ ಕಾನೂನು ಜಾರಿಗೆ ತರಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿರಸ್ತೇದಾರ್ ಕೆ.ಜಿ. ಗೊರವರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ತಾಲೂಕಾಧ್ಯಕ್ಷ ಜಗದೀಶ ಕುಸಗೂರ, ಪೀರಪ್ಪ ಲಮಾಣಿ, ಚಂದ್ರಪ್ಪ ಮಾನೇರ, ಬಿ.ಎಚ್. ಸಣ್ಣಮನಿ, ಬಸವರಾಜ ಕೋಡಿಹಳ್ಳಿ, ಸಿದ್ದಪ್ಪ ನೂಲಗೇರಿ, ಉಮೇಶ ಗುಡ್ಡಣ್ಣನವರ, ಆರ್.ಎಂ. ದೊಡ್ಡಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net