ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ

10hnr1
Published on

ಹೊನ್ನಾವರ: ಹೊಂಡಗಳಿಂದ ತುಂಬಿ ಸಂಚಾರಕ್ಕೆ ಅನನುಕೂಲವಾಗಿರುವ ಖರ್ವಾ- ಮಾವಿನಕುರ್ವಾ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಸಿಸಿ ತಾಲೂಕಿನ ಖರ್ವಾ ಗ್ರಾಮದ ಆಟೋ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು ಶುಕ್ರವಾರ ರಸ್ತೆಯ ಹೊಂಡಗಳಲ್ಲಿ ತೆಂಗು ಮತ್ತು ಬಾಳೆ ಸಸಿಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು.

ಖರ್ವಾ-ಮಾವಿನಕುರ್ವಾ ರಸ್ತೆಯು ಕೆಲವು ವರ್ಷಗಳಿಂದ ಹದಗೆಟ್ಟಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ.

ರಸ್ತೆಯನ್ನು ಸರಿಪಡಿಸುವಂತೆ ಈ ಭಾಗದ ಸಾರ್ವಜನಿಕರು ಹಲವಾರಿ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಕಳೆದ ಮೂರ್ನಾಲ್ಕು ವರ್ಷದಿಂದ ತೀರಾ ಹದಗೆಟ್ಟಿದ್ದು ಕೇವಲ ತೇಪೆ ಹಾಕಿ ಸಾರ್ವಜನಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರವಾಗಿ ರಸ್ತೆ ನವೀಕರಿಸಬೇಕು. ರಸ್ತೆ ದುರಸ್ತಿ ನಡೆಸದಿದ್ದಲ್ಲಿ ಮುಂದೆ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೊನ್ನಾವರದಿಂದ ಮಾವಿನಕುರ್ವಾಕ್ಕೆ ಸಂಜೆ ಸರಿಯಾಗಿ ಬಸ್ ಬಿಡುತ್ತಿಲ್ಲ. ಏಕೆ ಬಸ್ ಬೀಡುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ನಿಮ್ಮ ಊರಿನ ರಸ್ತೆ ಮೊದಲು ಸರಿ ಮಾಡಿಕೊಳ್ಳಿ ಅಂತಾರೆ. ಒಂದು ವರ್ಷದಲ್ಲಿ ಹಾಳಾಗುವ ಕಳಪೆ ರಸ್ತೆ ಬೇಡ, ನಮಗೆ ಸುಸಜ್ಜಿತವಾದ ರಸ್ತೆ ಬೇಕು. ಪ್ರತಿನಿತ್ಯ ಶಾಲೆಗೆ ಆಗಮಿಸಲು ರಸ್ತೆಯಲ್ಲಿ ನಡೆದು ಬರುವ ಸಂದರ್ಭದಲ್ಲಿ ರಸ್ತೆಬದಿಯಲ್ಲಿ ಬಿದ್ದಿರುವ ಜಲ್ಲಿ ಕಲ್ಲುಗಳು ವಾಹನದ ಟೈರ್​ಗೆ ಸಿಲುಕಿ ನಮಗೆ ಬಡಿಯುತ್ತದೆ. ಇದರಿಂದ ನಮಗೆ ಶಾಲೆಗೆ ತೆರಳಲು ಭಯವಾಗುತ್ತಿದೆ. ಶೀಘ್ರವಾಗಿ ಉತ್ತಮ ರಸ್ತೆ ಮಾಡಬೇಕು ಎಂದು ಶಾಲಾ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ರಿಕ್ಷಾ ಚಾಲಕರಾದ ಸತೀಶ್ ಮೇಸ್ತ, ವಿಷ್ಣು ನಾಯ್ಕ, ಗ್ರಾಮಸ್ಥರಾದ ಶ್ರೀಕೃಷ್ಣ ಹೆಗಡೆ, ಸತೀಶ ನಾಯ್ಕ, ಮಾಬ್ಲೆಶ್ವರ ನಾಯ್ಕ, ಈಶ್ವರ ಗೌಡ, ಶ್ರೀಧರ ನಾಯ್ಕ, ರಾಶೀದ್ ಮುಲ್ಲಾ, ಮಾರುತಿ ನಾಯ್ಕ, ಮಂಜುನಾಥ ಗೌಡ, ಹನೀಫ್, ದಿನೇಶ ಅಂಬಿಗ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net