ದುರ್ವಾಸನೆ ಮರುಕಳಿಸಿದರೆ ಅಣಬೆ ಫ್ಯಾಕ್ಟರಿ ಬಂದ್

Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಮಂಜೂರಿನ ತಿರುವೈಲು ಗ್ರಾಮದ ವೈಟ್ ಗ್ರೋ ಅಣಬೆ ಫ್ಯಾಕ್ಟರಿಗೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ನೀಡಿದ ಗಡುವು ಆ.19ರಂದು ಮುಕ್ತಾಯಗೊಳ್ಳಲಿದ್ದು, ವರದಿ ಸಲ್ಲಿಸಿದ ಬಳಿಕವೂ ದುರ್ವಾಸನೆ ಮರುಕಳಿಸಿದರೆ ಸ್ಥಳೀಯರೇ ಫ್ಯಾಕ್ಟರಿ ಮುಚ್ಚಲಿದ್ದಾರೆ ಎಂದು ವೈಟ್ ಗ್ರೋ ಅಣಬೆ ಫ್ಯಾಕ್ಟರಿ ವಿರುದ್ಧ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಮಾರ್ಚ್ ತಿಂಗಳಲ್ಲಿ ಸ್ಥಳೀಯರ ಹೋರಾಟಕ್ಕೆ ಮಣಿದು ನಾಲ್ವರು ಅಧಿಕಾರಿಗಳನ್ನು ಒಳಗೊಂಡ ತನಿಖಾ ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಿದ್ದರು. ಈಗ ಪರಿಶೀಲನೆ ನಡೆಯುತ್ತಿದೆ. ಈ ನಡುವೆ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಆಯುಕ್ತರು ದುರ್ವಾಸನೆ ಬೀರುವುದಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಸಂದರ್ಭ ಕಂಪನಿ ಕೆಲಸ ನಿಲ್ಲಿಸುತ್ತದೆ. ಸಹಜವಾಗಿಯೇ ವಾಸನೆ ಇರುವುದಿಲ್ಲ ಎಂದು ಗುರುವಾರ ಸ್ಥಳೀಯ ನಿವಾಸಿ ಹಾಗೂ ಸಂತ್ರಸ್ತ ಜಗದೀಶ ಶೇಣವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾಂಪೋಸ್ಟ್ ಘಟಕವನ್ನು ತಂತ್ರಜ್ಞಾನ ಬಳಸಿ ಭಾರತದಲ್ಲಿ ಎಲ್ಲೂ ಇಲ್ಲದ ಮಾದರಿಯಲ್ಲಿ ಮುಚ್ಚಲಾಗಿದೆ ಎಂದು ಫ್ಯಾಕ್ಟರಿಯಯ ವ್ಯವಸ್ಥಾಪಕ ನಿರ್ದೇಶಕ ಜೆ.ಆರ್.ಲೋಬೊ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು. 200 ಜನರ ಉದ್ಯೋಗ ನೆಪದಲ್ಲಿ 20 ಸಾವಿರ ಜನರಿಗೆ ಆರೋಗ್ಯ ಸಮಸ್ಯೆ ತಂದೊಡ್ಡುವ ಈ ಯೋಜನೆ ಬೇಡ. ಎಲ್ಲೂ ಜನವಸತಿ ಪ್ರದೇಶದಲ್ಲಿ ಇಂಥ ಕಾಂಪೋಸ್ಟ್ ಘಟಕಗಳು ಇಲ್ಲ. ಆದ್ದರಿಂದ ಬೇರೆ ಕಡೆ ಇಂಥ ಘಟಕ ಮುಚ್ಚುವ ಪ್ರಮೇಯ ಎದುರಾಗಿಲ್ಲ ಎಂದರು.

ಫ್ಯಾಕ್ಟರಿಯ ದುರ್ವಾಸನೆಯಿಂದ ಶ್ವಾಸಕೋಶ ಮತ್ತು ಚರ್ಮಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಕಲುಷಿತ ನೀರಿನಿಂದ ಸ್ಥಳೀಯ ಬಾವಿಗಳ ನೀರು ಹಾಳಾಗುತ್ತಿದೆ. ಇಲ್ಲಿ ಜನರಿಗೆ ತೊಂದರೆಯಾಗುತ್ತಿದ್ದು ಪರಿಸರವೂ ಹಾಳಾಗುತ್ತಿದೆ. ಆದರೂ ಯಾವ ಇಲಾಖೆಯೂ ಕ್ರಮಕ್ಕೆ ಮುಂದಾಗಿಲ್ಲ. ವೈಯಕ್ತಿಕ ಲಾಭಕ್ಕೆ ಅಥವಾ ಹೊರರಾಜ್ಯದವರಿಗೆ ಉದ್ಯೋಗ ಕೊಡುವುದಕ್ಕಾಗಿ ಸ್ಥಳೀಯರ ಜೀವ ಮತ್ತು ಜೀವನವನ್ನು ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸ್ಥಳೀಯ ಪ್ರಮುಖರಾದ ಓಂ ಪ್ರಕಾಶ್ ಶೆಟ್ಟಿ, ಲಕ್ಷ್ಮಣ, ರಿಯಾಜ್ ಅಹಮ್ಮದ್, ವಿಲಿಯಂ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net