

ಮಂಗಳೂರು: ಕಳೆದ ಒಂದು ತಿಂಗಳಿನಿಂದ ಏರಿಕೆ ಕಂಡಿದ್ದ ಟೊಮ್ಯಾಟೊ ಬೆಲೆ ನಿಧಾನವಾಗಿ ಇಳಿಕೆಯಾಗುತ್ತಿದ್ದಂತೆ ಪ್ರಸ್ತುತ ಈರುಳ್ಳಿ ಸರದಿ. ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರದಿಂದ ಎರಡು ವಾರಗಳಿಂದ ಕರಾವಳಿಗೆ ಈರುಳ್ಳಿ ಸಾಗಾಟ ಪ್ರಮಾಣ ಇಳಿಮುಖವಾಗಿದೆ. ಕೊರತೆಯ ಮಧ್ಯೆ ಬೇಡಿಕೆ ಹೆಚ್ಚಾದ ಕಾರಣ ಈರುಳ್ಳಿಯ ದರ ಹೆಚ್ಚಾಗುತ್ತಿದೆ.
ಕರಾವಳಿಗೆ ಬೇಡಿಕೆಯಂತೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದರಿಂದ ಸೆಪ್ಟೆಂಬರ್‌ನಲ್ಲಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ದೇಶದ ಅತಿ ದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ನಾಸಿಕ್‌ನ ಲಸಲ್‌ಗಾಂವ್ ಎಪಿಎಂಸಿಯಲ್ಲಿ ಸಗಟು ಬೆಲೆ ಹೆಚ್ಚಳವಾಗಿದೆ. ಆ.4ರಂದು ಕ್ವಿಂಟಾಲ್‌ಗೆ 1,550 ರೂ. ಇದ್ದ ದರ, ಈಗ 2,300 ರೂ.ಗೆ ತಲುಪಿದೆ. ಕಳೆದ ಎಂಟು ತಿಂಗಳಲ್ಲಿ ದಾಖಲಾದ ಈರುಳ್ಳಿಯ ಗರಿಷ್ಠ ಸಗಟು ದರ ಇದು. ಮಂಗಳೂರಿನಲ್ಲೂ ಎರಡು ವಾರದಿಂದ ಬೆಲೆ ಏರಿಕೆಯಾಗುತ್ತಿದೆ. ಕಳೆದ ವಾರ ಕ್ವಿಂಟಾಲ್‌ಗೆ 2000 ರೂ. ಇದ್ದ ದರ ಈಗ 2900 ರೂ. ದಾಟಿದೆ. ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಈರುಳ್ಳಿಯ ದರ 34-35 ರೂ. ಇದ್ದು, ಕಳೆದ ವಾರ 26 ರೂ. ಇತ್ತು.
ಬೇಡಿಕೆ ಹೆಚ್ಚಳ, ಪೂರೈಕೆ ಕೊರತೆ: ರೈತರು ಮುಂಗಾರು ಬಿತ್ತನೆ ಚಟುವಟಿಕೆಯಲ್ಲಿರುವ ಕಾರಣ ಲಸಲ್‌ಗಾಂವ್ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ದಿನಕ್ಕೆ 25,000-30,000 ಕ್ವಿಂಟಾಲ್ ಬರುತ್ತಿದ್ದ ಈರುಳ್ಳಿ, ಈಗ 10,000 ಕ್ವಿಂಟಾಲ್‌ಗೆ ಕುಸಿದಿದೆ.
ಪೂರೈಕೆಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಮಳೆಯಿಂದ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಈರುಳ್ಳಿಯ ಹೊಸ ಬೆಳೆ ಒಂದು ತಿಂಗಳು ವಿಳಂಬವಾಗಿದೆ. ಮಹಾರಾಷ್ಟ್ರದ ಅಹ್ಮದ್ ನಗರದಲ್ಲೂ ಪೂರೈಕೆ ಕಡಿಮೆ ಇದೆ. ಈ ಮಧ್ಯೆ ಬಾಂಗ್ಲಾದೇಶದಿಂದಲೂ ಹೆಚ್ಚಿನ ಬೇಡಿಕೆ ಬಂದಿದೆ. ದೇಶದಲ್ಲಿ ಈರುಳ್ಳಿ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಮುಂಗಾರು ಬಿತ್ತನೆಗೆ ತೊಡಕಾಗಿದೆ. ಸಣ್ಣ ಮತ್ತು ಮಧ್ಯಮ ರೈತರು ಸಂಗ್ರಹಿಸಿದ ಬೇಸಿಗೆ ಈರುಳ್ಳಿ ದಾಸ್ತಾನು ಕೂಡ ಮುಗಿಯುತ್ತ ಬಂದಿದೆ. ಇವೆಲ್ಲ ಕಾರಣಗಳಿಂದ ಈರುಳ್ಳಿ ಬೆಲೆ ಏರಿಕೆ ಆಗಿದೆ.